ಮಧ್ಯಪ್ರದೇಶ: ಪೆರೋಲ್ ಮೇಲೆ ಹೊರಗೆ ಬಂದ ಕೈದಿಯನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಗ್ವಾಲಿಯರ್‌ನಲ್ಲಿ ನಡೆದಿದೆ. ಇಡೀ ಘಟನೆಯು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವಿಡಿಯೊದಲ್ಲಿ, ವ್ಯಕ್ತಿಯು ಕಾಲೋನಿ ಸದಸ್ಯರೊಂದಿಗೆ ಮಾತನಾಡುತ್ತಿದ್ದಾಗ, ಇಬ್ಬರು ದುಷ್ಕರ್ಮಿಗಳು ಬೈಕ್‍ನಲ್ಲಿ ಬಂದು ಗುಂಡು ಹಾರಿಸಲು ಶುರು ಮಾಡಿದ್ದಾರೆ. ಆಗ ಆ ವ್ಯಕ್ತಿ ಗುಂಡು ತಗುಲಿ ನೆಲದ ಮೇಲೆ ಬಿದ್ದಾಗ ಬೈಕ್‍ನಿಂದ ಇಳಿದು ಮತ್ತೆ ಗುಂಡು ಹಾರಿಸಿ ಆತನನ್ನು ಕೊಂದು ನಂತರ ಬೈಕ್ ಹತ್ತಿ ಓಡಿಹೋಗಿದ್ದಾರೆ.
#WATCH | MP: Released Prisoner Fatally Shot By Two Attackers On Motorcycle In Gwalior#MadhyaPradesh #gwalior #MPNews pic.twitter.com/m8avkf3kN1
— Free Press Madhya Pradesh (@FreePressMP) November 8, 2024
ಮೃತ ವ್ಯಕ್ತಿಯನ್ನು ದಾಬ್ರಾದ ಗೋಪಾಲ್ ಬಾಗ್ ನಗರದಲ್ಲಿ ವಾಸಿಸುತ್ತಿದ್ದ ಸೋನಿ ಸರ್ದಾರ್ ಎಂದೂ ಕರೆಯಲ್ಪಡುವ ಜಸ್ವಂತ್ ಸಿಂಗ್ (45 ವರ್ಷ) ಎಂದು ಗುರುತಿಸಲಾಗಿದ್ದು, ಆತ 2006ರಲ್ಲಿ ಮಾಡಿದ ಕೊಲೆಗಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದು, ಇತ್ತೀಚೆಗೆ 15 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು.
ಊಟದ ನಂತರ, ಜಸ್ವಂತ್ ಸಿಂಗ್ ಪ್ರತಿದಿನ ತಮ್ಮ ಕಾಲೋನಿಯ ಸುತ್ತಲೂ ವಾಕಿಂಗ್ ಮಾಡುತ್ತಿದ್ದ. ಅಂದು ರಾತ್ರಿ ಆತ ಊಟ ಮಾಡಿದ ನಂತರ ವಾಕಿಂಗ್ ಮಾಡುತ್ತಾ ಅಲ್ಲಿದ್ದ ಕೆಲವು ಜನರೊಂದಿಗೆ ಮಾತನಾಡುತ್ತಿದ್ದಾಗ, ಬೈಕ್‍ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಇದ್ದಕ್ಕಿದ್ದಂತೆ ಜಸ್ವಂತ್ ಸಿಂಗ್ ಮೇಲೆ ಗುಂಡುಗಳನ್ನು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಜಸ್ವಂತ್ ಸಿಂಗ್ ಕುಟುಂಬ ಸದಸ್ಯರು ತಕ್ಷಣ ಆತನನ್ನು ಗ್ವಾಲಿಯರ್‌ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಆತ ಮೃತಪಟ್ಟಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಉತ್ತಮ ನಡವಳಿಕೆಯಿಂದಾಗಿ, ಆತನಿಗೆ ಸಾಂದರ್ಭಿಕ ಪೆರೋಲ್ ನೀಡಲಾಗಿತ್ತು.
ಗೋಪಾಲ್ ಬಾಗ್ ನಗರವು ಗೇಟೆಡ್ ಕಾಲೋನಿಯಾಗಿದ್ದು, ಮೈನ್‍ಗೇಟ್‍ನಲ್ಲಿ ಗಾರ್ಡ್ ಪೋಸ್ಟ್ ಅನ್ನು ಹೊಂದಿತ್ತು. ಆದರೆ, ಸೆಕ್ಯುರಿಟಿ ಗಾರ್ಡ್ ಕಳೆದ ಎರಡು ದಿನಗಳಿಂದ ರಜೆಯಲ್ಲಿದ್ದು, ಗೇಟ್ ತೆರೆದಿದ್ದರಿಂದ ಇದು ದುಷ್ಕರ್ಮಿಗಳಿಗೆ ಅಪರಾಧವನ್ನು ಮಾಡಲು ಮತ್ತು ಯಾವುದೇ ಅಡೆತಡೆಯಿಲ್ಲದೆ ತಪ್ಪಿಸಿಕೊಳ್ಳಲು ಸುಲಭವಾಗಿ ದಾರಿಮಾಡಿಕೊಟ್ಟಿದೆ.
ಘಟನೆಯ ಬಗ್ಗೆ ತಿಳಿದ ಕೂಡಲೇ ಗ್ವಾಲಿಯರ್ ಎಸ್ಪಿ ಧರ್ಮವೀರ್ ಸಿಂಗ್ ಯಾದವ್ ದಾಬ್ರಾಗೆ ಬಂದಿದ್ದಾರೆ. ಅವರು ಅಪರಾಧದ ಸ್ಥಳ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಜೊತೆಗೆ ಘಟನೆಯ ಸಮಯದಲ್ಲಿ ಹಾಜರಿದ್ದ ಸಾಕ್ಷಿಗಳೊಂದಿಗೆ ಮಾತನಾಡಿದ್ದಾರೆ. ಕೊಲೆಗೆ ಕಾರಣವೇನೆಂಬುದನ್ನು ತಿಳಿಯಲು ಅವರ ಕುಟುಂಬ ಸದಸ್ಯರನ್ನು ವಿಚಾರಿಸಿದ್ದಾರೆ.
ದಾಳಿಕೋರರನ್ನು ಹುಡುಕಲು ಪೊಲೀಸ್ ತಂಡಗಳನ್ನು ರಚಿಸಿದ್ದು, ಆ ಪ್ರದೇಶದಾದ್ಯಂತ ಅನೇಕ ಚೆಕ್ ಪಾಯಿಂಟ್‍ಗಳನ್ನು ಸ್ಥಾಪಿಸಲಾಗಿದೆ. ವಿಡಿಯೊದಲ್ಲಿ ಕಂಡುಬಂದ ಶಂಕಿತರನ್ನು ಗುರುತಿಸಲು ಇದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.