Tuesday, 10th December 2024

Viral Video: ಬಿಜೆಪಿ ರೋಡ್‌ಶೋನಲ್ಲಿ ಖದೀಮನ ಕೈಚಳಕ; ಮಿಥುನ್‌ ಚಕ್ರವರ್ತಿಯ ಪರ್ಸ್‌ ಎಗರಿಸಿದ ಚಾಲಾಕಿ ಕಳ್ಳ- ವಿಡಿಯೊ ಇದೆ

ರಾಂಚಿ: ಜಾರ್ಖಂಡ್‌ನಲ್ಲಿ ನಡೆದ ಬಿಜೆಪಿ(BJP) ರ್ಯಾಲಿಯಲ್ಲಿ ನಟ, ರಾಜಕಾರಣಿ ಮಿಥುನ್ ಚಕ್ರವರ್ತಿ(Actor Mithun Chakraborty) ಅವರ ಜೇಬಿನಿಂದ ಪರ್ಸ್‌ ಕಳ್ಳತನವಾಗಿರುವ ಘಟನೆ ನಡೆದಿದೆ. ಧನ್‌ಬಾದ್‌ನಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ನಟನ ಪರ್ಸ್‌ ಅನ್ನು ಹಿಂದಿರುಗಿಸುವಂತೆ ಆಯೋಜಕರು ಮನವಿ ಮಾಡಿರುವ ವಿಡೀಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ(social media) ವೈರಲ್ ಆಗಿದೆ.

ಜಾರ್ಖಂಡ್‌ನ ಚುನಾವಣಾ ಕಾವು ಏರಿದ್ದು, 43 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಎನ್‌ಡಿಎ, ಇಂಡಿಯಾ ಒಕ್ಕೂಟದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಮಿಥುನ್ ಚಕ್ರವರ್ತಿ ಅವರು ಬಿಜೆಪಿ ಅಭ್ಯರ್ಥಿ ಅಪರ್ಣಾ ಸೇನ್ ಗುಪ್ತಾ ಅವರ ಪರ ಪ್ರಚಾರ ಮಾಡಲು ಜಾರ್ಖಂಡ್‌ನ ನಿರ್ಸಾ ಅಸೆಂಬ್ಲಿ ಪ್ರದೇಶದಲ್ಲಿ ಬೃಹತ್ ರೋಡ್‌ಶೋ ನಡೆಸಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಜನರು ನೆರೆದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಿರುವ ಸನ್ನಿವೇಶವೂ ನಿರ್ಮಾಣವಾಗಿದೆ.

ಇದೇ ವೇಳೆ ಚುನಾವಣಾ ಪ್ರಚಾರ ರ್ಯಾಲಿ ನಡೆಸುತ್ತಿದ್ದ ನಟ ಕಮ್ ರಾಜಕಾರಣಿ ಮಿಥುನ್ ಚಕ್ರವರ್ತಿಯವರ ಜೇಬಿಗೆ ಜೇಬುಗಳ್ಳನೊಬ್ಬ ನೇರವಾಗಿ ಕೈ ಹಾಕಿ ಪರ್ಸ್‌ ಕದ್ದಿದ್ದಾನೆ. ಈ ವಿಡಿಯೋದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕನ ಪರ್ಸ್‌ ಅನ್ನು ದಯವಿಟ್ಟು ನೀಡಿ ಎಂದು ಜೇಬುಗಳ್ಳರಿಗೆ ಪದೇ ಪದೇ ಮನವಿ ಮಾಡುತ್ತಿರುವುದು ಕಂಡು ಬಂದಿದ್ದು, “ಪರ್ಸ್‌ ಯಾರು ಕದ್ದರೂ ಅದನ್ನು ಮಿಥುನ್‌ ಅವರಿಗೆ ಹಿಂದಿರುಗಿಸಿ” ಎಂದು ಕೇಳಿಕೊಂಡಿರುವುದು ವಿಡಿಯೋದಲ್ಲಿದೆ.

https://twitter.com/DrJain21/status/1856311709016772939

ಸ್ಥಳದಲ್ಲಿ ಭದ್ರತಾ ಪಡೆಗಳು ಇದ್ದರೂ ಪ್ರೇಕ್ಷಕರನ್ನು ನಿಯಂತ್ರಿಸುವುದು ಕಷ್ಟವಾಗಿತ್ತು. ನಟನ ಜತೆ ಫೋಟೋ, ವಿಡಿಯೋ ತೆಗೆದುಕಳ್ಳಲು ಎಲ್ಲರೂ ಮುಗಿಬಿದ್ದರು. ಈ ಗಡಿಬಿಡಿಯ ನಡುವೆ ಖತರ್ನಾಕ್‌ ಕಳ್ಳನೊಬ್ಬ ಪರ್ಸ್‌ ಎಗರಿಸಿದ್ದ. ಈ ಘಟನೆಯಿಂದ ಬೇಸರಗೊಂಡ ಚಕ್ರವರ್ತಿ ಅವರು ಬೇಗ ಕಾರ್ಯಕ್ರಮ ಮುಗಿಸಿದರು.

ಅಕ್ಟೋಬರ್ 27 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ದ್ವೇಷಪೂರಿತ ಭಾಷಣದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸಿದ ನಂತರ ಚಕ್ರವರ್ತಿ ಇತ್ತೀಚೆಗೆ ಸುದ್ದಿಯಲ್ಲಿದ್ದರು. “ನಾವು ನಿನ್ನನ್ನು ಕೊಂದು ನೆಲಕ್ಕೆ ಎಸೆಯುವ ದಿನ ಬರುತ್ತದೆ” ಎಂದು ಇನ್ನೊಂದು ಧರ್ಮದ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದರು. ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ನಟ ಈ ಹೇಳಿಕೆ ನೀಡಿದ್ದರು.

ಇನ್ನು ಈ ವಿಷಯವನ್ನಿಟ್ಟುಕೊಂಡು ಜಾರ್ಖಂಡ್ ಮುಕ್ತಿ ಮೋರ್ಚ್ (ಜೆಎಂಎಂ) ಜಮ್ತಾರಾ ಘಟಕ ಬಿಜಿಪಿಯನ್ನು ಟೀಕಿಸಿದ್ದು,. ಪರ್ಸ್ ವಾಪಸ್ ಕೊಡುವಂತೆ ಬಿಜೆಪಿ ನಾಯಕರು ಮನವಿ ಮಾಡಿರುವ ವಿಡಿಯೋ ಹಂಚಿಕೊಂಡಿರುವ ಜೆಎಂಎಂ “ಬಿಜೆಪಿ ಬೆಂಬಲಿಗರೇ ನಿಮ್ಮ ನಾಯಕರನ್ನಾದರೂ ಬಿಡಿ. ಮಿಥುನ್ ಚಕ್ರವರ್ತಿ ಬಿಜೆಪಿ ಪರ ಪ್ರಚಾರಕ್ಕೆ ಬಂದಿದ್ದು, ಯಾರೋ ಅವರ ಜೇಬು ಪಿಕ್ ಮಾಡಿದ್ದಾರೆ. ಎಂತಹ ಅದ್ಭುತ ಕುಟುಂಬ” ಎಂದು ವ್ಯಂಗ್ಯವಾಡಿದೆ.

ಇದನ್ನು ಓದಿ: Viral Video: ಅಪ್ಪನ ಜತೆ ನಡ್ಕೊಂಡು ಹೋಗ್ತಿದ್ದ ಬಾಲಕನ ಕಿಡ್ನಾಪ್‌ಗೆ ಯತ್ನ; ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ-ವಿಡಿಯೊ ಇದೆ