Tuesday, 17th May 2022

ಬಿಜೆಪಿ ದೇಶಕ್ಕೊಂದು ಸಾಂಸ್ಕೃತಿಕ ಅಸ್ಮಿತೆ ನೀಡಿದೆ: ಸಿ.ಟಿ.ರವಿ

ಬೆಂಗಳೂರು: ಬಿಜೆಪಿ ದೇಶಕ್ಕೊಂದು ರಾಮಮಂದಿರ ಮೂಲಕ ಸಾಂಸ್ಕೃತಿಕ ಅಸ್ಮಿತೆ ನೀಡಿದೆ. ದೇಶ ಮೊದಲು ಎಂಬ ತತ್ವ ನಮ್ಮ ಪಕ್ಷದ್ದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ 41ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿ.ಟಿ.ರವಿ, ಬಿಜೆಪಿ ಪಕ್ಷ ಇವತ್ತು ಬಲಾಢ್ಯವಾಗಿ ಬೆಳೆದಿದ್ದು, ಪ್ರಸಕ್ತ ವಿಶ್ವದಲ್ಲಿ ಅತಿ ಹೆಚ್ಚು ರಾಜಕೀಯ ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿದೆ. ಅಲ್ಲದೇ ಇದು ಅತಿ ಹೆಚ್ಚು ಸಂಸದರು, ಶಾಸಕರು ಮಹಿಳಾ ಮತ್ತು ದಲಿತ ಸಮುದಾಯದವರನ್ನು ಹೊಂದಿರುವ ಪಕ್ಷವಾಗಿದೆ ಎಂದರು.

ನಮ್ಮ ಪಕ್ಷ ಎರಡು ಹಂತ ದಾಟಿದೆ. ಮೊದಲು ಜನ ಸಂಘದ ಮೂಲಕ ಮೂಲಕ ಕಾಶ್ಮೀರದ ಏಕತೆಗಾಗಿ ಶಾಮ ಪ್ರಸಾದ್ ಮುಖರ್ಜಿ ಶ್ರಮಿಸಿದ್ದು, ದೇಶಕ್ಕಾಗಿ ನೆಹರು ಸಂಪುಟದಿಂದ ಹೊರ ಬಂದು ದೇಶ ಮೊದಲು ಎನ್ನುವ ಪಕ್ಷ ಬೇಕಾಗುತ್ತದೆ ಎಂದು ಅರಿತು ಜನ ಸಂಘ ಸ್ಥಾಪಿಸಿದರು.

ದೀನ್ ದಯಾಳ್ ಉಪಾಧ್ಯಾಯ್ ಅವರ ಕೊಡುಗೆಯೂ ಪಕ್ಷಕ್ಕೆ ಇದೆ. ವಾಜಪೇಯಿ, ಅಡ್ವಾಣಿ ಅವರ ನಾಯಕತ್ವದಲ್ಲಿ 1980 ರಲ್ಲಿ ಬಿಜೆಪಿ ಉದಯಿಸಿ, 1984 ರಲ್ಲಿ ಮೊದಲ ಸಂಸತ್ ಚುನಾವಣೆ ಎದುರಿಸಲಾಯಿತು. ಎಲ್ಲ ವರ್ಗದ ಅಂತ್ಯೋದಯ ಯೋಜನೆಗಳು ನಮ್ಮ ಯೋಜನೆಗಳು ಅದಾನಿ ಅಂಬಾನಿ ಅನುಕೂಲಕ್ಕಾಗಿ ಅಲ್ಲ. ಕಟ್ಟಕಡೆಯ ಜನರಿಗೆ ತಲುಪಿಸುವ ಯೋಜನೆಗಳು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ ಎಂದು ತಿಳಿಸಿದರು.

ಅಟಲ್ ಜಿ ಕಾಲದಲ್ಲಿ ಸುವರ್ಣ ಚತುಸ್ಪತ ಯೋಜನೆ, ಗ್ರಾಮ್ ಸಡಕ್ ಯೋಜನೆಗಳು ಅವರ ಕೊಡುಗೆ ಈಗ ಆಡಳಿತ ಸುಧಾರಣೆ ಪರ್ವ ನಡೆಯುತ್ತಿದೆ. ಈಗ ನೂರು ರೂ. ಕೇಂದ್ರದಿಂದ ಬಂದರೆ ಅದು ಕಡೆಯ ವ್ಯಕ್ತಿಗೆ ತಲುಪುತ್ತದೆ.ಬಿಜೆಪಿಗೆ ರಾಜಕೀಯ ಉದ್ಯೋಗ ಅಲ್ಲ ಸೇವೆ. ಇದೇ ಧ್ಯೇಯದೊಂದಿಗೆ ಪಕ್ಷ ಹಾಗೂ ದೇಶ ಕಟ್ಟುವ ಕೆಲಸ ಮಾಡೋಣ ಎಂದು ಸಿ.ಟಿ.ರವಿ ಕರೆ ನೀಡಿದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily