Tuesday, 17th May 2022

ಮೋದಿಯವರ ಎಲ್ಲ ಯೋಜನೆಗಳಲ್ಲಿ ಡಾ.ಅಂಬೇಡ್ಕರ್ ಅವರ ಸಂವಿಧಾನದ ಆಶಯ: ಸಿ.ಟಿ.ರವಿ

C T Ravi

ಬೆಂಗಳೂರು: ನರೇಂದ್ರ ಮೋದಿಯವರ ಎಲ್ಲ ಯೋಜನೆಗಳಲ್ಲಿ ಡಾ.ಅಂಬೇಡ್ಕರ್ ಅವರ ಸಂವಿಧಾನದ ಆಶಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ ತಿಳಿಸಿದರು.

ಭಾರತೀಯ ಜನತಾ ಯುವಮೋರ್ಚಾ ವತಿಯಿಂದ ಕ್ಲಬ್ ಹೌಸ್ ವೇದಿಕೆಯಲ್ಲಿ ಕಮಲ ಕ್ಲಬ್ ಏರ್ಪಡಿಸಿದ್ದ ಸಂವಿಧಾನ ಸಂಭ್ರಮ ಚಿಂತನ ಮಂಥನ ಕಾರ್ಯಕ್ರಮ ದಲ್ಲಿ “ಬಾಬಾ ಸಾಹೇಬ್ ಅಂಬೇಡ್ಕರ್ ಕನಸಿನ ಸಮರಸ ಸಮಾಜ ನಿರ್ಮಾಣದಲ್ಲಿ ನಮ್ಮ ಪಾತ್ರ” ಕುರಿತು ಮಾತನಾಡಿದರು. ವಂಶವಾದ, ಜಾತಿವಾದದ ರಾಜಕೀಯ, ಮತಬ್ಯಾಂಕ್ ಆಧರಿತ ರಾಜನೀತಿ ದೂರವಾಗಬೇಕು ಎಂಬುದೇ ಬಿಜೆಪಿ ಆಶಯವಾಗಿದೆ. ರಾಷ್ಟ್ರವಾದ, ಸಮರಸ ಸಮಾಜದ ನಿರ್ಮಾಣವೇ ಬಿಜೆಪಿ ಗುರಿ. ಅದು ಸದ್ದಿಲ್ಲದ ಕ್ರಾಂತಿ ಆಗಬೇಕು ಎಂದು ಆಶಿಸಿದರು. ಸಂವಿಧಾನವೇ ಭಾರತದ ಆತ್ಮವಾಗಿದೆ. ಆ ಆಶಯದೊಂದಿಗೆ ನಾವು ಕೆಲಸ ಮಾಡು ತ್ತೇವೆ. ಸಂವಿಧಾನಶಿಲ್ಪಿಯ ಧ್ಯೇಯವೇ ನಮ್ಮ ಪಕ್ಷದ ನಿಲುವು ಎಂದು ವಿವರಿಸಿದರು.

ಕಾಂಗ್ರೆಸ್ ಪಕ್ಷ, ಪಿಡಿಪಿ, ಎನ್‍ಸಿಪಿ, ಆರ್‍ಜೆಡಿ, ಸಮಾಜವಾದಿ ಪಾರ್ಟಿ, ಬಿಜೆಡಿ, ಟಿಎಂಸಿ, ಡಿಎಂಕೆ, ತೆಲುಗು ದೇಶಂ, ಟಿಆರ್‍ಎಸ್, ವೈಎಸ್‍ಆರ್‍ಪಿಗಳು ಕಂಪಾರ್ಟ್‍ ಮೆಂಟ್ ಆಧರಿತವಾಗಿವೆ. ಬಿಜೆಪಿಯಲ್ಲಿ ಕೌಟುಂಬಿಕ ವಾರೀಸುದಾರಿಕೆ ಇಲ್ಲ. ಮೋದಿ, ನಡ್ಡಾ ಅವರೂ ಕೌಟುಂಬಿಕ ವಾರೀಸುದಾರಿಕೆ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್‍ನಲ್ಲಿ ಸಾಮಂತರಾಗಿರಬಹುದು. ಮಹಾರಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕರ್ನಾಟಕದ ಜೆಡಿಎಸ್ ಕೂಡ ಆ ಕಂಪಾರ್ಟ್‍ ಮೆಂಟ್‍ನ ಮೊದಲ ಸ್ಥಾನವನ್ನು ವಂಶದೊಳಗೇ ಇಟ್ಟುಕೊಂಡಿದೆ ಎಂದು ತಿಳಿಸಿದರು.

ಸಾಮಾಜಿಕ ನ್ಯಾಯವು ಪ್ರತಿ ಕಾರ್ಯಕರ್ತನ ಧ್ಯೇಯವಾಗಲಿ. ಜಾತಿಯ ಆಧಾರದಲ್ಲಿ ತಾರತಮ್ಯ ಮಾಡದಿರಿ ಎಂದು ಅವರು ಸಲಹೆ ನೀಡಿದರು. ಪಂಚ ತೀರ್ಥದ ಅಭಿವೃದ್ಧಿ ಮಾಡಿದ್ದೇ ಬಿಜೆಪಿಯ ಕೇಂದ್ರ ಸರಕಾರ ಎಂದ ಅವರು, ಅಸ್ಪøಶ್ಯತೆಗೆ ಮನೆ, ಮನದಲ್ಲಿ ಜಾಗ ಕೊಡಬೇಡಿ ಎಂದು ತಿಳಿಸಿದರು. ಸಮಾಜ ಸುಧಾರಣೆಯೂ ನಮ್ಮ ಚಟುವಟಿಕೆಯ ಭಾಗ ಆಗಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ. ಇವತ್ತು ಹೊಸರೀತಿಯಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಶಕ್ತಿಗಳು ತಲೆ ಎತ್ತುತ್ತಿವೆ. ನಮ್ಮ ಪಕ್ಷದಲ್ಲಿ ಎತ್ತರಕ್ಕೆ ಏರಲು ನಮಗೆ ದೊಡ್ಡ ರಾಜಕೀಯ ಕೌಟುಂಬಿಕ ಹಿನ್ನೆಲೆ ಬೇಕಾಗಿಲ್ಲ. ಪ್ರಧಾನಿಯವರಿಗೇ ಅಂಥ ರಾಜಕೀಯ ಕೌಟುಂಬಿಕ ಹಿನ್ನೆಲೆ ಇಲ್ಲ. ಕೆಲವು ರಾಜಕೀಯ ಪಕ್ಷಗಳನ್ನು ಗಮನಿಸಿದರೆ ಪಕ್ಷದೊಳಗೂ ಕಂಪಾರ್ಟ್‍ಮೆಂಟ್ ಇದೆ ಎಂದು ತಿಳಿಸಿದರು.

ಹಿಂದೆ ರಾಜೀವ್ ಗಾಂಧಿ ಅವರ ಅಧಿಕಾರಾವಧಿಯಲ್ಲಿ 100 ರೂಪಾಯಿ ಅನುದಾನದಲ್ಲಿ ಕೇವಲ 15 ರೂಪಾಯಿ ಫಲಾನುಭವಿಯನ್ನು ತಲುಪುತ್ತಿತ್ತು. ಆದರೆ, ಈಗ ನೇರ ಸೌಲಭ್ಯ ವರ್ಗಾವಣೆ ಮಾಡುತ್ತಿದ್ದು, ಪೂರ್ಣ ಅನುದಾನ ಬಳಕೆಯಾಗುತ್ತಿದೆ ಎಂದು ತಿಳಿಸಿದರು.

ಜಾತಿ ಕಟ್ಟಿಕೊಂಡು ಅಧಿಕಾರ ಹಿಡಿಯುವುದು ನಮ್ಮ ಉದ್ದೇಶವಲ್ಲ. ರಾಷ್ಟ್ರಹಿತಕ್ಕೆ ಅಡ್ಡಿಯನ್ನು ದೂರ ಮಾಡಿ, ಸಮಾಜದಲ್ಲಿ ಏಕತೆಯ ಮೂಲಕ ಅಭಿವೃದ್ಧಿ ಸಾಧನೆಯೇ ಮತಬ್ಯಾಂಕ್ ರಾಜಕೀಯವನ್ನು ಮೋದಿಯವರು ಜಾರಿಗೊಳಿಸಿಲ್ಲ. ಅವರ ಘೋಷಣೆಯೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಧರಿತವಾಗಿವೆ. ಆದರೆ, ಸಿದ್ದರಾಮಯ್ಯ ಅವರು ಮತ ಬ್ಯಾಂಕ್ ರಾಜಕೀಯಕ್ಕಾಗಿ ಶಾದಿ ಭಾಗ್ಯ, ಕೆಲವೇ ಜಾತಿಯ ಮಕ್ಕಳಿಗೆ ಪ್ರವಾಸ ಭಾಗ್ಯ ಜಾರಿಗೊಳಿಸಿದ್ದರು. ಅದರ ಹಿಂದೆ ಜಾತಿಯ ಕಮಟು ವಾಸನೆ ಇತ್ತು ಎಂದರು.

ಸಂಘದ ಶಾಖೆಯಲ್ಲಿ ಹೇಳಿಕೊಟ್ಟ ಅಸ್ಪøಶ್ಯತೆಯನ್ನು ವಿರೋಧಿಸುವ ಹಾಡನ್ನು ನೆನಪಿಸಿಕೊಂಡರು. ಅಸ್ಪøಶ್ಯತೆಯನ್ನು ಮನಸ್ಸಿನಿಂದ ದೂರಮಾಡಬೇಕಾದ ಆಶಯವುಳ್ಳ ಹಾಡುಗಳನ್ನು ಉದಾಹರಿಸಿದರು. ಡಾ. ಅಂಬೇಡ್ಕರ್ ಅವರ ಆಶಯವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೆಸ್ಸೆಸ್ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಸಮಾಜದ ಎಲ್ಲ ವರ್ಗಕ್ಕೂ ಬಲ ಬರಬೇಕು ಎಂಬುದೇ ಡಾ.ಅಂಬೇಡ್ಕರ್ ಅವರ ಆಶಯವಾಗಿತ್ತು. ಸಮಾಜದೊಳಗಿನ ಕಂಪಾರ್ಟ್‍ಮೆಂಟ್, ಅಸ್ಪøಶ್ಯತೆ, ಜಾತೀಯತೆ ವಿರುದ್ಧ ಅವರು ಹೋರಾಡಿದರು. ಬಿಜೆಪಿ ರಾಷ್ಟ್ರಹಿತದ ಹಿನ್ನೆಲೆಯಲ್ಲಿ ಹುಟ್ಟಿದ ಪಕ್ಷ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆ ನಮ್ಮೆದುರಿಗಿತ್ತು ಎಂದರು.

ಭಗವಂತ ಎಂದೂ ಜಾತಿ ಗಮನಿಸಿ ಪ್ರತ್ಯಕ್ಷ ಆಗಲಿಲ್ಲ. ಭಕ್ತ ಕುಂಬಾರ, ಶಬರಿ, ಮಾರ್ಕಂಡೇಯ ಸೇರಿ ಜಾತಿ ಮೇಲೆ ಒಲಿಯುವವನಲ್ಲ ಎಂದು ಸಂದೇಶ ನೀಡಿದ್ದಾನೆ. ಋಷಿಮುನಿಗಳೂ ಸಮರಸ ಸಮಾಜದ ಸಂದೇಶವನ್ನೇ ನೀಡಿದ್ದರು ಎಂದು ವಿವರಿಸಿದರು. ಬಿಜೆಪಿ ಸುಧಾರಣೆಯ ನೇತೃತ್ವ ವಹಿಸಿದ ರಾಜಕೀಯ ಪಕ್ಷ. ಅಧಿಕಾರ ಎಂಬುದು ನಮ್ಮ ಅಂತಿಮ ಗುರಿಯಲ್ಲ. ಸಂವಿಧಾನದ ಆಶಯ ಅನುಷ್ಠಾನವೇ ನಮ್ಮ ಗುರಿ ಎಂದು ತಿಳಿಸಿದರು.

ನವೆಂಬರ್ 26 ರ ಸಂವಿಧಾನ ದಿನಾಚರಣೆಯ ಅಂಗವಾಗಿ ಈ ಕಾರ್ಯಕ್ರಮ ಏರ್ಪಡಿಸಿದ್ದು, “ಸಂವಿಧಾನದ ಗಹನತೆ ಮತ್ತು ಅಂಬೇಡ್ಕರ್ ಸಮಗ್ರತೆ” ಕುರಿತು ಶಾಸಕರು ಮತ್ತು ಚಿಂತಕರಾದ ಎನ್.ಮಹೇಶ್ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನ ದಿನ ಆಚರಣೆ ಆರಂಭಿಸಿ ಪರಿವರ್ತನೆಯ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಸಂವಿಧಾನದ ಮಹತ್ವ, ಇತಿಹಾಸ, ಮುಂದಿನ ಗುರಿಯ ಕುರಿತು ಅವರು ಜನತೆ ತಿಳಿಯಬೇಕೆಂದು ಆಶಿಸಿದ್ದಾರೆ.

ಪ್ರಧಾನಿಯವರಿಗೆ ಗೌರವ ಸಲ್ಲಿಸುತ್ತೇನೆ ಎಂದರು. ಬಿಜೆಪಿ ಸಂವಿಧಾನವಿರೋಧಿ ಎಂಬ ಕಾಂಗ್ರೆಸ್ ಅಪಪ್ರಚಾರದಲ್ಲಿ ಹುರುಳಿಲ್ಲ ಎಂದರು. ನೈತಿಕತೆ, ಕಾನೂನಿನ ಹಕ್ಕು ಬಾಧ್ಯತೆ ತಿಳಿಸುವ, ರಾಜಕೀಯ ವ್ಯವಸ್ಥೆ ಕುರಿತು ಮಾಹಿತಿ ಕೊಡುವ, ಅರ್ಥಶಾಸ್ತ್ರದ ಅರಿವು ಮೂಡಿಸುವ, ಸಾಮಾಜಿಕ ಸಮಾನವಾಗಿ ಸಮಭಾವವನ್ನು ಹೇಳಿಕೊಡುವ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನವನ್ನೂ ನೀಡುವ ಮಹತ್ವದ ಸಮಗ್ರ ಗ್ರಂಥವೇ ಸಂವಿಧಾನ ಎಂದು ವಿವರಿಸಿದರು.
“ಬಾಬಾ ಸಾಹೇಬರ ಚಿಂತನೆ ಹಾಗೂ ಮೋದಿಜೀಯವರ ಸಾಧನೆ” ಕುರಿತು ಶಾಸಕರಾದ ಪಿ.ರಾಜೀವ ಅವರು ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿ ಪ್ರಧಾನಿ, ರಾಷ್ಟ್ರಪತಿ ಆಗಲು ಸಾಧ್ಯ ಇದೆ ಎಂದರೆ ಅದಕ್ಕೆ ಕಾರಣ ನಮ್ಮ ಸಂವಿಧಾನ ಗ್ರಂಥ ಎಂದರು. ಅಂಬೇಡ್ಕರರ ಸಾಮಾಜಿಕ ಸಮಾನತೆಯ ಪರಿಕಲ್ಪನೆಯನ್ನು ಮೋದಿಯವರು ಸಾಕಾರಗೊಳಿಸಿದ್ದಾರೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾದ ಡಾ. ಕೆ.ಸಿ.ಸಂದೀಪಕುಮಾರ ಅವರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಜಿತ್ ಹೆಗಡೆ ಬೆಳ್ಳೇಕೇರಿ, ಡಾ.ಮಲ್ಲಿಕಾರ್ಜುನ ಬಾಳೇಕಾಯಿ ಅವರು ನಿರೂಪಿಸಿದರು.