Wednesday, 25th November 2020

ನಾಟ್ಯ ಸಾಧಕಿ ಜ್ಯೋತಿ ಪಟ್ಟಾಭಿರಾಮ್

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜ್ಯೋತಿ ಪಟ್ಟಾಭಿರಾಮ್ ಅವರು ನೃತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪರೂಪದ್ದು.

ವೈ.ಕೆ.ಸಂಧ್ಯಾಶರ್ಮ

ತುಂಬಿದ ಕೊಡ ತುಳುಕುವುದಿಲ್ಲ ಎಂಬುದು ಪ್ರಸಿದ್ಧ ನಾಣ್ಣುಡಿ. ಈ ಮಾತಿಗೆ ಅನ್ವರ್ಥಕರಾದವರು ನಾಟ್ಯ ಕಲಾ ವಿಶಾರದೆ,
ನಾಟ್ಯಾಚಾರ್ಯ, ನೃತ್ಯ ಸಂಯೋಜಕಿ, ವಾಗ್ಗೇಯಕಾರ್ತಿ ಜ್ಯೋತಿ ಪಟ್ಟಾಭಿರಾಮ್ ಅವರು. ನೃತ್ಯಕ್ಷೇತ್ರದ ಸಾಧಕರ ಪಟ್ಟಿಯಲ್ಲಿ ಮಹತ್ವದ ಹೆಸರು.

ಬೆಂಗಳೂರು-ಮೈಸೂರು ಹೆದ್ದಾರಿಯ ರಾಮನಗರದ ಬಳಿ, ಕಣ್ವ ಜಲಾಶಯದ ಸಮೀಪ ಸುಂದರ ಪ್ರಕೃತಿಯ ಮಡಿಲಲ್ಲಿ ಸಾಧನ ಧಾಮ ಆಶ್ರಮ ಸ್ಥಾಪಿಸಿ, ವಿಸ್ತಾರ ಪ್ರದೇಶದಲ್ಲಿ ‘ಭಾರತೀಯ ಗುರು ಪರಂಪರೆಯ ಒಂದು ವಿಶಿಷ್ಟ ಗುರುಕುಲವನ್ನು ನಡೆಸಿಕೊಂಡು ಬರು ತ್ತಿದ್ದಾರೆ.

ಇಲ್ಲಿ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂಸ್ಕಾರಯುಕ್ತ ವಿದ್ಯಾದಾನ. ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪುಗೊಳಿಸುವ ಸುಪ್ರ ಯತ್ನ. ಸುತ್ತಮುತ್ತಲ ಹಳ್ಳಿಯ ಮಕ್ಕಳಿಗೆ ಇಲ್ಲಿ ಉಚಿತ ಸಾರಿಗೆ ಮತ್ತು ಊಟ ನೀಡಿ ಎಲ್.ಕೆ.ಜಿ.ಯಿಂದ ಹಿಡಿದು ಹತ್ತನೆಯ ತರಗತಿ ಯವರೆಗೆ ವಿದ್ಯಾಭ್ಯಾಸವಲ್ಲದೆ, ಯೋಗ-ಧ್ಯಾನ- ಸಾಧನೆಗಳನ್ನು ಕಲಿಸಲಾಗುತ್ತಿದೆ. ಇದರ ಸದುಪಯೋಗವನ್ನು ನಮ್ಮ ದೇಶದವರು ಮಾತ್ರವಲ್ಲದೆ ವಿದೇಶದವರೂ ಸಾಕಷ್ಟು ಸಂಖ್ಯೆ ಯಲ್ಲಿ ಪಡೆದುಕೊಳ್ಳುತ್ತಿರುವುದು ವಿಶಿಷ್ಟ ಸಂಗತಿ.

ಇವೆಲ್ಲಕ್ಕಿಂತ ಮಿಗಿಲಾಗಿದದ್ದು ಅವರ ಅವಿರತ ನೃತ್ಯಸೇವೆ. ಸಾವಿರಾರು ವಿದ್ಯಾರ್ಥಿಗಳನ್ನು ನೃತ್ಯಪಟುಗಳನ್ನಾಗಿ ತಯಾರು
ಮಾಡಿದ ಹೆಮ್ಮೆ-ಧನ್ಯತಾಭಾವ ವ್ಯಕ್ತಪಡಿಸುವ ಈಕೆ ಸರಳ ನಡೆ-ನುಡಿಯ ನಿಗರ್ವಿ. ಭರತನಾಟ್ಯ-ಯೋಗ ಹಾಗೂ ಆಧ್ಯಾತ್ಮಿಕತೆ ಗಳ ಸಾಂಗತ್ಯದ ಅಪರೂಪದ ಕಲಾವಿದೆಯಾದ ಇವರು ವೃತ್ತಿಯಲ್ಲಿ ಪ್ರಾಧ್ಯಾಪಕಿಯಾದರೆ, ಪ್ರವೃತ್ತಿಯಿಂದ ನೃತ್ಯ ಕಲಾವಿದೆ, ನೃತ್ಯ ಸಂಯೋಜಕಿ ಹಾಗೂ ಆಧ್ಯಾತ್ಮಿಕ ತಳಹದಿಯ ಮೇಲೆ ಧ್ಯಾನ-ಯೋಗ-ಶ್ರೀವಿದ್ಯಾ ಸಾಧನೆಗಳ ಬೆಳಕಿನಲ್ಲಿ ನೃತ್ಯವನ್ನು ಆತ್ಮವಿದ್ಯೆಯಾಗಿ ಕಲಿಸುತ್ತಿರುವ ನೃತ್ಯಗುರು.

ಮನೆಯಲ್ಲೇ ತರಗತಿ


ಸುಮಾರು ನಾಲ್ಕು ದಶಕಗಳಿಂದ ನೃತ್ಯಕ್ಷೇತ್ರದಲ್ಲಿ ಸೃಜನಾತ್ಮಕ ವಾಗಿ ತೊಡಗಿಸಿಕೊಂಡಿರುವ ಜ್ಯೋತಿಯವರು ಶಿವಮೊಗ್ಗ ದವರು. ಅಜ್ಜಿಯ ಒತ್ತಾಸೆಯಿಂದ ಭರತನಾಟ್ಯವನ್ನು ಕಲಿತು, ಜೊತೆಯಲ್ಲಿ ಬಿ.ಎ. ಪದವಿಧರೆಯಾದರು. ಅನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ (ಇಂಗ್ಲಿಷ್) ಪದವಿ ಪಡೆದರು. ನೃತ್ಯಶಾಸ್ತ್ರದ ಬಗ್ಗೆ ಅತೀವ ಆಸಕ್ತಿ ಇದ್ದುದರಿಂದ ಅದನ್ನೂ ಕೂಲಂಕಷವಾಗಿ ಅಧ್ಯಯನ ಮಾಡಿದರು. ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕಿಯಾಗಿ ಸರ್ಕಾರಿ ವೃತ್ತಿಗೆ ಸೇರ್ಪಡೆಯಾದರೂ ನೃತ್ಯದ ಸೆಳೆತ ಬಿಡಲಿಲ್ಲ. ಮನೆಯಲ್ಲೇ ಕೆಲವು ಮಕ್ಕಳಿಗೆ ನೃತ್ಯ ಕಲಿಸಲಾರಂಭಿಸಿದರು.

ಮುಂದೆ ಜ್ಯೋತಿ, ‘ಸಾಧನ ಸಂಗಮ ನಾಟ್ಯಸಂಸ್ಥೆಯಲ್ಲಿ ದೊಡ್ಡ ಮಟ್ಟದಲ್ಲಿ ಶಿಷ್ಯರನ್ನು ತಯಾರು ಮಾಡಲು ಆರಂಭಿಸಿದ್ದು ಒಂದು ಆಸಕ್ತಿಕರ ಕಥೆ. ಯೋಗ ಕಲಿಯಲು ಹೋಗಿ ಅಂತರ ರಾಷ್ಟೀಯ ಖ್ಯಾತಿಯ, ಯೋಗಾಚಾರ್ಯ ಪಟ್ಟಾಭಿರಾಮ್ ಅವರ ಕೈ ಹಿಡಿದು ಅವರೊಂದಿಗೆ ‘ಸಾಧನಾ ಪಥದಲ್ಲಿ ಸಾಗಿ ಸಾಧನೆ ಮಾಡಿದ್ದು ಇನ್ನೂ ಕುತೂಹಲಕರವಾದ ಘಟ್ಟ. ಈ ‘ಸಾಧನ ಸಂಗಮ’ ದಲ್ಲಿ ನೃತ್ಯ ಕೇಂದ್ರವನ್ನು ಸ್ಥಾಪಿಸಿ, ಬೆಂಗಳೂರಿನ ಬಸವೇಶ್ವರನಗರದ ಆಸಕ್ತರಿಗೆ, ಯೋಗ- ನೃತ್ಯ-ಸಂಗೀತ ಕಲೆ-ಆತ್ಮವಿದ್ಯೆಗಳ ಪ್ರಸಾರವನ್ನು, ಶ್ರೀ ಪಟ್ಟಾಭಿರಾಮರ ಸಾಹಚರ್ಯದಲ್ಲಿ ಕೈಗೊಂಡರು.

ನಾಲ್ಕು ದಶಕಗಳ ಸೇವೆ
ಕಳೆದ ನಲವತ್ತು ವರ್ಷಗಳಿಂದ ಜ್ಯೋತಿ, ತಮ್ಮದೇ ಆದ ಕೆಲವು ವಿಶಿಷ್ಟ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಾ ನೃತ್ಯ ರಂಗಕ್ಕೆ ಸಲ್ಲಿಸುತ್ತಿರುವ ಸೇವೆ ಅಪಾರ. ತಮ್ಮಂಗಳದ ‘ರಂಗೋಪನಿಷತ್ ರಂಗಸ್ಥಳದಲ್ಲಿ ‘ನೃತ್ಯ ನಿರಂತರ-ಎಂಬ ಕಾರ್ಯಕ್ರಮದ ಮೂಲಕ, ಯುವ ಕಲಾವಿದರನ್ನು ಪ್ರೋತ್ಸಾಹಿಸಲು ಪ್ರತಿ ತಿಂಗಳೂ ಶಾಸ್ತ್ರೀಯ ನೃತ್ಯಪ್ರದರ್ಶನ, ಪುರುಷ ನರ್ತನ ಕಾರ್ಯಕ್ರಮ ಗಳನ್ನು ಏರ್ಪಡಿಸುತ್ತ ಬಂದಿದ್ದಾರೆ. ‘ಸಾಧನ ಸಂಗಮದ ರಜತ ಮಹೋತ್ಸವದಲ್ಲಿ 102 ವೇದಿಕೆ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಮತ್ತು 2001 ರಿಂದ ನಿರಂತರವಾಗಿ ಶಾಸ್ತ್ರೀಯ ನೃತ್ಯೋತ್ಸವ ‘ಮುಕುಲ-ಯುಗಳ-ಬಹುಲ ನಡೆಸಿಕೊಂಡು ಬರುತ್ತಿರುವ ಸೇವೆ, ನೃತ್ಯರಂಗಕ್ಕೆ ಇವರಿತ್ತ ಬಹು ದೊಡ್ಡ ಕೊಡುಗೆ.

ವೈಯಕ್ತಿಕವಾಗಿ ಜ್ಯೋತಿಯವರು ನೂರಾರು ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನು ದೇಶಾದ್ಯಂತ ಪ್ರಮುಖ ನೃತ್ಯೋತ್ಸವಗಳಲ್ಲಿ
ನೀಡಿರುವರಲ್ಲದೆ, ಪ್ರತಿವರ್ಷ ಅಮೆರಿಕಾಗೆ ಭೇಟಿ ನೀಡುತ್ತ ಅಲ್ಲಿ, ಅನೇಕ ಉಪಯುಕ್ತ ನೃತ್ಯ ಕಾರ್ಯಾಗಾರ, ಪ್ರಾತ್ಯಕ್ಷಿಕೆ,
ಉಪನ್ಯಾಸಗಳು ಮತ್ತು ಪ್ರದರ್ಶನಗಳನ್ನು ನೀಡುತ್ತ ಬಂದಿರುವುದು ಹೆಗ್ಗಳಿಕೆಯ ಸಂಗತಿ. ಕೆನಡಾ ಮತ್ತು ಅಮೇರಿಕಾ ದೇಶದ ನ್ಯೂಜರ್ಸಿಯಲ್ಲಿ ‘ಸಾಧನ ಸಂಗಮ ಇಂಟರ್ ನ್ಯಾಷನಲ್ ಸಂಸ್ಥೆ ಸ್ಥಾಪಿಸಿ, ವಿದೇಶಗಳಲ್ಲಿ ಯೋಗ-ನೃತ್ಯ ಮತ್ತು ಭಾರತೀಯ ಸಂಸ್ಕೃತಿಯ ಪ್ರಸಾರ ಕೈಗೊಂಡಿದ್ದಾರೆ.

ಸ್ವಾಮಿ ರಾಮ ಅವರ ಮಾರ್ಗದರ್ಶನ
ಹಿಮಾಲಯದ ಮಹಾನ್ ಯೋಗಿ ಸ್ವಾಮಿ ರಾಮರಿಂದ, ಶ್ರೀ ವಿದ್ಯಾ ಸಾಧನಾ ದೀಕ್ಷೆ ಪಡೆದು, ಪ್ರಸ್ತುತ ಅಂತಾರಾಷ್ಟ್ರೀಯ
ಖ್ಯಾತಿಯ ಸಂಗೀತಜ್ಞ, ನೃತ್ಯ ಪರಿಣತ, ಪದ್ಮಶ್ರೀ ಮಹಾಮಹೋಪಾಧ್ಯಾಯ ಮೈಸೂರಿನ ಡಾ.ರಾ.ಸತ್ಯನಾರಾಯಣರವರಲ್ಲಿ ಶ್ರೀವಿದ್ಯಾ ಸಾಧನೆ ಮಾಡಿರುವ ಇವರಿಗೆ ಹಲವಾರು ಉನ್ನತ ಪ್ರಶಸ್ತಿಗಳು ತಾವಾಗಿಯೇ ಅರಸಿ ಬಂದಿವೆ.

ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ . ‘ನಾಟ್ಯ-ಯೋಗ ಸರಸ್ವತಿ, ಭರತ ಪ್ರಶಸ್ತಿ’, ‘ಆರ್ಯಭಟ’ ಇಂಟರ್ ನ್ಯಾಷನಲ್ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿ-ಗೌರವ, ಸನ್ಮಾನಗಳು ಸಂದಿವೆ. ಇವೆಲ್ಲಕ್ಕಿಂತ ಹಿರಿದಾದ ಕರ್ನಾಟಕ ರಾಜ್ಯೋತ್ಸವ ಉನ್ನತ ಪ್ರಶಸ್ತಿ ಪ್ರಸ್ತುತ ಅವರ ಮುಡಿಗೇರಿದ ವಿಶೇಷ ಸಂದರ್ಭವಿದು.

ಜೊತೆಗೆ ಜ್ಯೋತಿಯವರು ಕೈಗೊಂಡಿರುವ ಇನ್ನೊಂದು ಮಹತ್ಕಾರ್ಯವೆಂದರೆ ಸಾಧನ ಸಂಗಮದ ಅಂಗವಾಗಿ ಸ್ಥಾಪಿತವಾಗಿ ರುವ ರಸರುಷಿ (ಗುರು ರಾ.ಸ. ಅವರ ಹೆಸರಿನಲ್ಲಿರುವ ಸಂಶೋಧನಾ ಕೇಂದ್ರ-ಮೈಸೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ) ಯ ಆಶ್ರಯದಲ್ಲಿ ಅವಿರತ, ಕರೋನಾ ಪಿಡುಗಿನ ಈ ದುರಿತ ಕಾಲದಲ್ಲೂ ಜ್ಞಾನ ಪ್ರಸಾರಕ್ಕಾಗಿ ಇಲ್ಲಿ, ಸತತವಾಗಿ ಅನೇಕ ವಿದ್ವಾಂಸರುಗಳಿಂದ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಇವರ ಇವರ ಮಗಳು ಸಾಧನಶ್ರೀ ಕೂಡ ಯಶಸ್ವೀ ವೈದ್ಯಳಾಗಿದ್ದುಕೊಂಡು ಉತ್ತಮ ನೃತ್ಯಕಲಾವಿದೆಯಾಗಿದ್ದಾರೆ.

Leave a Reply

Your email address will not be published. Required fields are marked *