Saturday, 24th October 2020

ಪ್ರವಾಹ, ಅತಿವೃಷ್ಠಿ ನಿರ್ವಹಣೆ ಕ್ರಮಕ್ಕಾಗಿ ಡಿಸಿಎಂ ಕಾರಜೋಳ ಸೂಚನೆ

ಬಾಗಲಕೋಟೆ: ಜಿಲ್ಲೆಯಲ್ಲಿ ಇತ್ತೀಚಿನ ಭೀಕರ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಜನ, ಜಾನುವಾರುಗಳಿಗೆ ಹಾನಿ, ರೈತರ ಬೆಳೆ, ಮನೆಗಳು ನಾಶವಾಗಿ ಜನರು ಪಡುತ್ತಿರುವ ತೊಂದರೆಯನ್ನು ನಿವಾರಿಸಲು ತುರ್ತು ಕ್ರಮಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಮಣ್ಣಿನ ಮಳೆಗಳು ಹೆಚ್ಚಾಗಿರುವದರಿಂದ ಮಳೆಯಿಂದಾಗಿ ಶಿಥಿಲಗೊಂಡು ಬಿದ್ದು, ಜನರು ವಾಸಕ್ಕಾಗಿ ಕಷ್ಟ ಪಡುತ್ತಿರುವುದನ್ನು ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರ ಮುಖಾಂತರ ಸರ್ವೆ ಮಾಡಿಸಿ ಅವರುಗಳಿಗೆ ಸೂರು ಒದಗಿಸಿಕೊಡುವ ಕಾರ್ಯ ತುರ್ತಾಗಿ ನಡೆಯಬೇಕು. ಗುಡಿಸಲು ವಾಸಿಗಳು ಕೂಡಾ ಸೂರು ಇಲ್ಲದೇ ಸಂಕಷ್ಟ ಪಡುತ್ತಿದ್ದು, ಅವರಿಗೂ ಮನೆ ಒದಗಿಸುವ ಕೆಲಸ ಮಾಡತಕ್ಕದ್ದು ಎಂದು ತಿಳಿಸಿದ್ದಾರೆ.

ಜನರು ಕೂಲಿ ನಾಲಿ ಮಾಡಿ ಬದುಕಬಹುದು ಆದರೆ ವಾಸಕ್ಕೆ ಮನೆ ಇಲ್ಲದಿದ್ದರೆ ಅವರು ಅನುಭವಿಸುವ ಕಷ್ಟವನ್ನು ಗಮನಿಸ ಬೇಕಾಗುತ್ತದೆ. ಈಗಾಗಲೇ ಸಂಪರ್ಕ ರಸ್ತೆ ದುರಸ್ಥಿ, ಬೆಳೆಹಾನಿ, ಜಾನುವಾರು ಹಾನಿ ಇವೆಲ್ಲವುಗಳ ಬಗ್ಗೆ ಸಂಪೂರ್ಣವಾಗಿ ಸರ್ವೆ ಮಾಡಿ ತುರ್ತು ಕ್ರಮಕೈಗೊಳ್ಳಲು ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಜಿಲ್ಲಾಡಳಿತದ ಮೂಲಕ ಸೂಕ್ತ ನಿರ್ದೇಶಕ ನೀಡಿ ಕ್ರಮ ಕೈಗೊಳ್ಳಲು ಸೂಚಿಸತಕ್ಕದ್ದೆಂದು ಕಾರಜೋಳ ತಿಳಿಸಿದ್ದಾರೆ.

ಅಗತ್ಯತೆಗನುಗುಣವಾಗಿ ಕಾಳಜಿ ಕೇಂದ್ರಗಳನ್ನು ಹೆಚ್ಚಿಗೆ ತೆರೆಯತಕ್ಕದ್ದು. ಈಗಾಗಲೇ ಇರುವ ಕಾಳಜಿ ಕೇಂದ್ರಗಳಲ್ಲಿ ಯಾವುದೇ ನೂನ್ಯತೆಗಳು ಬರದಂತೆ ಎಚ್ಚರ ವಹಿಸತಕ್ಕದ್ದು. ಈ ಎಲ್ಲ ಕೆಲಸಗಳು ಸಮರೋಪಾದಿಯಲ್ಲಿ ಕೈಗೊಂಡು ಕ್ಷಣ ಕ್ಷಣದ ಮಾಹಿತಿ ನೀಡುವದಲ್ಲದೇ ವಿಸ್ಕೃತವಾದ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *