Monday, 6th February 2023

ರಣಜಿ ಟ್ರೋಫಿ: ಸೋತ ಮುಂಬೈ, ದೆಹಲಿ ಇತಿಹಾಸ ನಿರ್ಮಾಣ

ನವದಹಲಿ: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2022-23ರ ರಣಜಿ ಟ್ರೋಫಿ ಋತುವಿನ ಪಂದ್ಯದಲ್ಲಿ ದೆಹಲಿ ತಂಡವು 43 ವರ್ಷಗಳ ನಂತರ ಮೊದಲ ಬಾರಿಗೆ ಮುಂಬೈ ತಂಡವನ್ನು ಸೋಲಿಸಿ ಇತಿಹಾಸ ನಿರ್ಮಿಸಿತು.

ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಆಡಿದ ಐದು ಪಂದ್ಯಗಳಲ್ಲಿ ದೆಹಲಿ ತಂಡ ಯಾವುದೇ ಪಂದ್ಯವನ್ನು ಗೆದ್ದಿರಲಿಲ್ಲ. 2 ಪಂದ್ಯಗಳಲ್ಲಿ ಸೋಲನು ಭವಿಸಿದ್ದರೆ, 3 ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿದ್ದವು.

ಪೃಥ್ವಿ ಶಾ, ಸರ್ಫರಾಜ್ ಖಾನ್, ನಾಯಕ ಅಜಿಂಕ್ಯಾ ರಹಾನೆ ಅವರಂತಹ ಸ್ಟಾರ್‌ ಆಟಗಾರರನ್ನು ಒಳಗೊಂಡಿದ್ದ ಹೊರತಾಗಿಯೂ ದೆಹಲಿ ವಿರುದ್ಧ ಸೋತಿರುವುದು 41 ಬಾರಿಯ ಚಾಂಪಿಯನ್ ಮುಂಬೈ ತಂಡಕ್ಕೆ ದೊಡ್ಡ ನಷ್ಟವಾಗಿದೆ. ಟಾಸ್ ಗೆದ್ದ ದೆಹಲಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 293 ರನ್ ಗಳಿಸಿ ಸರ್ವಪತನ ಕಂಡಿತು. ಮುಂಬೈನಂತಹ ಬಲಿಷ್ಠ ತಂಡಕ್ಕೆ ಅದು ಸಾಮಾನ್ಯ ಸ್ಕೋರ್ ಆಗಿತ್ತು.

ಇದರ ನಡುವೆಯೂ, ಸರ್ಫರಾಜ್ ಖಾನ್ 155 ಎಸೆತಗಳಲ್ಲಿ 16 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ನೆರವಿನಿಂದ 124 ರನ್ ಬಾರಿಸಿ ಮುಂಬೈ ತಂಡ 200ರ ಗಡಿ ದಾಟುವಂತೆ ನೋಡಿಕೊಂಡರು. ನಂತರ ಬ್ಯಾಟಿಂಗ್ ಮಾಡಿದ ದೆಹಲಿ ತಂಡದ ಪರ ವೈಭವ್ ರಾಹುಲ್ 114 ರನ್ ಗಳಿಸಿದರೆ, ಹಿಮ್ಮತ್ ಸಿಂಗ್ 85 ರನ್ ಬಾರಿಸಿ ಮುಂಬೈಗೆ ಪ್ರತಿರೋಧ ಒಡ್ಡಿದರು. ಇವರು ದೆಹಲಿ ತಂಡದ ಪರ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದವರಾಗಿದ್ದಾರೆ.

ಅಂತಿಮವಾಗಿ ಆತಿಥೇಯ ದೆಹಲಿ ತಂಡ ಮೊದಲ ಇನಿಂಗ್ಸ್‌ನಲ್ಲಿ 369 ರನ್ ಗಳಿಸಿ, 76 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದರು. ನಂತರ ಮುಂಬೈ ತಂಡ 2ನೇ ಇನ್ನಿಂಗ್ಸ್‌ನಲ್ಲಿ ಇನ್ನೂ ಕಳಪೆ ಬ್ಯಾಟಿಂಗ್ ಮಾಡಿ, ಕೇವಲ 170 ರನ್‌ಗಳಿಗೆ ಆಲೌಟ್ ಆಯಿತು.


94 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ದೆಹಲಿ 8 ವಿಕೆಟ್‌ಗಳು ಬಾಕಿ ಇರುವಂತೆಯೇ ಬೆನ್ನತ್ತಿ, ಪ್ರಸಕ್ತ ರಣಜಿ ಋತುವಿನ ಮೊದಲ ಗೆಲುವನ್ನು ಪಡೆದುಕೊಂಡಿತು.

error: Content is protected !!