Tuesday, 26th October 2021

ದೀದಿ ಭಾರೀ ಅಂತರದ ಗೆಲುವು ಸಾಧಿಸಲಿದ್ದಾರೆ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು : ಇಡೀ ಭಾರತದ ಗಮನ ಸೆಳೆದಿರುವ ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರೀ ಅಂತರದ ಗೆಲುವು ಸಾಧಿಸುವುದು ಖಚಿತ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಮೀಪಿಸಿದ್ದು, ಇದೇ ಸೆಪ್ಟಂಬರ್ 30ರಂದು ಚುನುವಾಣೆ ನಿಗದಿಯಾಗಿದೆ. ಮತದಾನ ಅಕ್ಟೋಬರ್ 3ರರವರೆಗೆ ನಡೆಯಲಿದೆ. ಮಮತಾ ಬ್ಯಾನರ್ಜಿ ಸ್ಪರ್ಧೆ ನಡೆಸಿದ್ದು, ತಾವು ಮುಖ್ಯಮಂತ್ರಿಯಾಗಿ ಉಳಿಯಲು ಈ ಚುನಾವಣೆಯನ್ನು ಗೆಲ್ಲಲೇ ಬೇಕಾದ ಅನಿವಾ ರ್ಯತೆ ಎದುರಾಗಿದೆ.

ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಮಮತಾ ಬ್ಯಾನರ್ಜಿ ಅವರು ಕೇವಲ ನಾಯಕಿಯಲ್ಲ, ಸಮಸ್ತ ಬಂಗಾಳಿಗರ ನಾಡಿಮಿಡಿತ. ಇತಿಹಾಸ ಸೃಷ್ಟಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಮತಾ ಅವರು ಕಳೆದ ಏಪ್ರಿಲ್‌ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 294 ವಿಧಾಸಭೆ ಕ್ಷೇತ್ರಗಳ ಪೈಕಿ 214 ಸ್ಥಾನಗಳನ್ನು ಜಯಿಸಿದ್ದರು. ಆಗಲೇ ಅವರು ಚರಿತ್ರೆ ಬರೆದಿದ್ದರು.

ಜನರ ಬಾವನೆಗಳನ್ನು, ಪ್ರಜಾಪ್ರಭುತ್ವ ಮೌಲ್ಯಗಳನ್ನು ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಂಡು ಗೌರವಿಸ ಬೇಕು. 2021ರ ಚುನಾವಣೆಯಲ್ಲಿ ಬಂಗಾಳದ ಮಹಾಜನತೆ ಮಮತಾ ಅವರಿಗೆ ಸ್ಪಷ್ಟ ಜನಾದೇಶ ನೀಡಿದ್ದಾಗಿದೆ. ಪ್ರಜಾಬಲಕ್ಕಿಂತ ದೊಡ್ಡದು ಬೇರೊಂದಿಲ್ಲ ಎಂದು ಟ್ವಿಟ್ಟರ್ ನಲ್ಲಿ ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *