Wednesday, 29th November 2023

ತುರ್ತು ಕಾರ್ಯಕ್ಕೆ ಅಂತರ್ ಜಿಲ್ಲೆ, ಅಂತರ್‍ರಾಜ್ಯ ತೆರಳುವವರಿಗೆ ಇ ಪಾಸ್ : ಆರ್. ವಿನೋತ್ ಪ್ರಿಯ

ಚಿತ್ರದುರ್ಗ:

ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದು, ತುರ್ತು ಕಾರ್ಯ ನಿಮಿತ್ತ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ತೆರಳಬಯಸುವವರಿಗೆ ಮಾತ್ರ ಇ-ಪಾಸ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಆನ್‍ಲೈನ್‍ನಲ್ಲಿಯೇ ಅರ್ಜಿ ಸಲ್ಲಿಸಬೇಕು. ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಬರುವ ಎಲ್ಲರಿಗೂ ಹೋಂ ಕ್ವಾರಂಟೈನ್ ಮಾಡುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕೋಷ್ಠಿಯಲ್ಲಿ ಅವರು, ಲಾಕ್‍ಡೌನ್ ಕುರಿತಂತೆ ಸರ್ಕಾರ ಹೊಸದಾಗಿ ಹೊರಡಿಸಿರುವ ಆದೇಶ ಕುರಿತಂತೆ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ವೈದ್ಯಕೀಯ ಚಿಕಿತ್ಸೆ, ಸ್ವಂತ ಮದುವೆ ಹಾಗೂ ಶವಸಂಸ್ಕಾರ ಸೇರಿದಂತೆ ಮೂರು ಪ್ರಮುಖ ಕಾರಣಗಳಿಗಾಗಿ ಮಾತ್ರ ಅಂತರ್‍ಜಿಲ್ಲೆ ಮತ್ತು ಅಂತರ್‍ರಾಜ್ಯಗಳಿಗೆ ತೆರಳುವವರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ಇ-ಪಾಸ್ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಮುಂಜಾಗ್ರತಾ ಕ್ರಮವಾಗಿ ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಬರುವ ಎಲ್ಲರಿಗೂ ರೋಗ ಲಕ್ಷಣ ಇರಲಿ, ಇಲ್ಲದಿರಲಿ, ಹೋಂ ಕ್ವಾರಂಟೈನ್ ಕಡ್ಡಾಯವಾಗಿ ಮಾಡಲಾಗುವುದು ಎಂದರು.

ತುರ್ತು ಕಾರ್ಯಗಳಿಗೆ ತೆರಳುವವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಅನುಕೂಲತೆಗಾಗಿ ಇ-ಪಾಸ್ ವಿತರಿಸಲು ಏಪ್ರಿಲ್ 23 ರಿಂದ ಆನ್‍ಲೈನ್‍ನಲ್ಲಿ ಇ-ಪಾಸ್ ಪೋರ್ಟಲ್ ಪ್ರಾರಂಭಿಸಲಾಗಿದೆ.

ಸಾರ್ವಜನಿಕರು ತಾವು ಇರುವ ಸ್ಥಳದಲ್ಲಿಯೇ ಈ ಪೋರ್ಟಲ್ ಮುಖಾಂತರ ಅರ್ಜಿ ಭರ್ತಿಮಾಡಿ, ಒಂದು ಗುರುತಿನ ಚೀಟಿ, ಹೊರ ಹೋಗಲು ಕಾರಣ, ದಾಖಲೆಯ ಮಾಹಿತಿ ನೀಡಿ ಕೇವಲ ಒಂದೇ ದಿನದಲ್ಲಿ ಇ-ಪಾಸ್ ಪಡೆಯಬಹುದು. ಸಾರ್ವಜನಿಕರ ಅನಾವಶ್ಯಕ ಓಡಾಟ ತಪ್ಪಿಸಲು ಈ ಸೌಲಭ್ಯ ಕಲ್ಪಿಸಲಾಗಿದೆ. ತುರ್ತು ವೈದ್ಯಕೀಯ ಚಿಕಿತ್ಸೆಗೆ ತೆರಳುವವರು, ಸ್ವಂತ ಮದುವೆ ಹಾಗೂ ಶವ ಸಂಸ್ಕಾರಕ್ಕೆ ಕುಟುಂಬದವರಿಗೆ ಮಾತ್ರ ಗರಿಷ್ಠ 04 ಜನರಿಗೆ ಮಾತ್ರ ಪಾಸ್ ನೀಡಲು ಅವಕಾಶವಿದೆ. ಇ-ಪಾಸ್ ಪಡೆಯಲು http://covid19passchitradurga.com ಲಿಂಕ್ ಬಳಸಿ ಆನ್‍ಲೈನ್ ಮೂಲಕ ಸಲ್ಲಿಸಬಹುದು ಎಂದರು.

ಕೃಷಿ, ತೋಟಗಾರಿಕೆ ಚಟುವಟಿಕೆ ಕೈಗೊಳ್ಳುವ ರೈತರಿಗೆ ಯಾವುದೇ ಪಾಸ್ ಅಗತ್ಯವಿಲ್ಲ. ಸರ್ಕಾರಿ ನೌಕರರು, ಅರಿ ಸರ್ಕಾರಿ ನೌಕರರು, ಕೈಗಾರಿಕೆಗಳ ನೌಕರರು ತಮ್ಮ ಗುರುತಿನ ಚೀಟಿ ತೋರಿಸಿ, ಕಾರ್ಯ ಕ್ಷೇತ್ರಕ್ಕೆ ತೆರಳಬಹುದು. ಆದರೆ ಅನಾವಶ್ಯಕವಾಗಿ ರಸ್ತೆಗಳಲ್ಲಿ ಸಂಚರಿಸುವಂತಿಲ್ಲ. ಜಿಲ್ಲೆಯ ಆಂಧ್ರಪ್ರದೇಶದ ಗಡಿ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಗಡಿ ದಾಟಿ ಯಾವುದೇ ವಾಹನ ಅಥವಾ ವ್ಯಕ್ತಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಆಂಧ್ರಪ್ರದೇಶದ ಗ್ರಾಮವೊಂದರ ಕೊರೊನಾ ಪಾಸಿಟೀವ್ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಇದ್ದ ಜಿಲ್ಲೆಯ ಜಾಜೂರಿನ ಒಟ್ಟು 10 ಶಂಕಿತರಿಗೆ ಕ್ವಾರಂಟೈನ್ ಮಾಡಿ, ಇವರ ಗಂಟಲುದ್ರವ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಿಸಿದ್ದು, ಎಲ್ಲರದ್ದೂ ನೆಗೆಟೀವ್ ವರದಿ ಬಂದಿದೆ.

ಒಂದು ವಾರದ ಬಳಿಕ ಮತ್ತೊಮ್ಮೆ ಅವರ ಗಂಟಲುದ್ರವ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಿಸಲಾಗುವುದು.

ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೋರಾನಾ ಪ್ರಕರಣ ವರದಿಯಾಗಿಲ್ಲ. ಆದರೂ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಜೊತೆಗೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಹಿಸವುದು ಸೂಕ್ತ. ದ್ವಿಚಕ್ರ ವಾಹನದಲ್ಲಿ ಒಬ್ಬರು ಹಾಗೂ 4 ಚಕ್ರ ವಾಹನಗಳಲ್ಲಿ ಇಬ್ಬರಿಗೆ ಮಾತ್ರ ಪ್ರಯಾಣಿಸುವ ಅವಕಾಶವಿದೆ. ರೈತರು ಕೃಷಿ ಪರಿಕರಗಳ ಮಾರಾಟ ಮತ್ತು ಕೊಂಡು ಕೊಳ್ಳುವಿಕೆಗೆ ಯಾವುದೇ ತೊಂದರೆಯಿಲ್ಲ. ರೈತರು ತಮ್ಮ ಜಮೀನಿನ ಪಹಣಿ ಅಥವಾ ಆಧಾರ್ ಕಾರ್ಡ್ ಕಡ್ಡಾಯವಾಗಿ ತಮ್ಮ ಬಳಿ ಇರಿಸಿಕೊಂಡಿರಬೇಕು ಎಂದರು.

ಈಗಾಗಲೇ ಜಿಲ್ಲೆಯಲ್ಲಿರುವ 60 ವರ್ಷ ಮೇಲ್ಪಟ್ಟವರು, ಅಸ್ತಮಾ, ರಕ್ತದೊತ್ತಡ, ಮಧುಮೇಹ, ಹೆಚ್.ಐವಿ, ಕ್ಯಾನ್ಸರ್ ರೋಗಿಗಳು ಹಾಗೂ ಗರ್ಭಿಣಿಯರ ವರದಿ ಪಡೆಯಲಾಗಿದೆ. ಪ್ರತಿನಿತ್ಯ ಅವರ ಅರೋಗ್ಯದ ಸ್ಥಿತಿಗತಿ ಬಗ್ಗೆ ನಿಗಾ ವಹಿಸಿ ಮಾಹಿತಿ ಪಡೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಪತ್ರಿಕಾಗೋಷ್ಠಿಯಲ್ಲಿ ಇದ್ದರು.

 

Leave a Reply

Your email address will not be published. Required fields are marked *

error: Content is protected !!