Wednesday, 17th July 2024

ಯಾದಗಿರಿ ಜಿಲ್ಲೆಯಲ್ಲಿ ಮತ್ತೆ 6 ಜನರಿಗೆ ಕರೊನಾ ಸೋಂಕು

ಯಾದಗಿರಿ,
ಜಿಲ್ಲೆಯಲ್ಲಿ ಭಾನುವಾರ ಮಧ್ಯಾಹ್ನದವರೆಗೆ 4 ವರ್ಷದ ಹೆಣ್ಣುಮಗು ಮತ್ತು 8 ವರ್ಷದ ಗಂಡುಮಗು ಸೇರಿದಂತೆ ಒಟ್ಟು 6 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರಿಂದ ಕೋವಿಡ್-19 ಸೋಂಕಿತರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುರಪುರ ತಾಲ್ಲೂಕಿನ ದಿವಲಗುಡ್ಡದ 27 ವರ್ಷದ ಮಹಿಳೆ (ಪ್ರಕರಣ ಸಂಖ್ಯೆ ಪಿ-1976), ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ 8 ವರ್ಷದ ಗಂಡುಮಗು (ಪಿ-1974), ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ 25 ವರ್ಷದ ಮಹಿಳೆ (ಪಿ-1975), ಸುರಪುರ ತಾಲ್ಲೂಕಿನ ದಿವಲಗುಡ್ಡದ 4 ವರ್ಷದ ಹೆಣ್ಣುಮಗು (ಪಿ-1972), ಯಾದಗಿರಿ ತಾಲ್ಲೂಕಿನ ಅಲ್ಲಿಪೂರ ತಾಂಡಾದ 17 ವರ್ಷದ ಯುವತಿ (ಪಿ-1973), ಅಲ್ಲಿಪೂರ ತಾಂಡಾದ 22 ವರ್ಷದ ಪುರುಷ (ಪಿ-2010) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇವರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈನಿಂದ ಯಾದಗಿರಿ ಜಿಲ್ಲೆಗೆ ಆಗಮಿಸಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಮೇ 14ರಂದು ಯಾದಗಿರಿ ಜಿಲ್ಲೆಗೆ ಆಗಮಿಸಿದ ಪಿ-1972 ಮತ್ತು ಪಿ-1976 ಪ್ರಕರಣ ವ್ಯಕ್ತಿಗಳನ್ನು ಸುರಪುರದ ನಿಷ್ಠಿ ಕಾಲೇಜು ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಮೇ 12ರಂದು ಯಾದಗಿರಿ ಜಿಲ್ಲೆಗೆ ಆಗಮಿಸಿದ ಪಿ-1974 ಮತ್ತು ಪಿ-1975 ಪ್ರಕರಣ ವ್ಯಕ್ತಿಗಳನ್ನು ಸುರಪುರ ಬಿಸಿಎಂ ಹಾಸ್ಟೆಲ್ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಪಿ-1973 ಮತ್ತು ಪಿ-2010 ಪ್ರಕರಣ ವ್ಯಕ್ತಿಗಳನ್ನು ಕನ್ನೆಕೊಳೂರು ಬಿಸಿಎಂ ಹಾಸ್ಟೆಲ್ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಇವರಿಬ್ಬರು ಕೂಡ ಮೇ 12ರಂದು ಯಾದಗಿರಿ ಜಿಲ್ಲೆಗೆ ಆಗಮಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ ಟಿಶ್ಯೂ ಪೇಪರ್ ಅನ್ನು ಬಳಸಬೇಕು. ಕೈ ಸ್ವಚ್ಛಗೊಳಿಸುವ ದ್ರಾವಣ (ಸ್ಯಾನಿಟೈಸರ್) ಅಥವಾ ನೀರು ಮತ್ತು ಸೋಪಿನಿಂದ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವಿಕೆಯನ್ನು ಮಾಡಬಾರದು. ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಸಹಾಯವಾಣಿ ಸಂಖ್ಯೆ 104 ಅಥವಾ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 08473 253950 ಹಾಗೂ ವಾಟ್ಸ್‍ಆಪ್ ಸಂಖ್ಯೆ 9449933946 ಗೆ ಸಂಪರ್ಕಿಸಬಹುದು. ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಹಕರಿಸಬೇಕೆಂದು ಅವರು ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!