Saturday, 15th June 2024

ರಾಬಕೋ ಹಾಲು ಒಕ್ಕೂಟದಿಂದ 10 ಲಕ್ಷ ದೇಣಿಗೆ: ಭೀಮಾನಾಯ್ಕ್

ಬಳ್ಳಾರಿ:

ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರಂತರ ಹೋರಾಟ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ರಾಬಕೋ) 10 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ ಎಂದು ರಾಬಕೋ ಅಧ್ಯಕ್ಷ, ಶಾಸಕ ಭೀಮಾನಾಯ್ಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಭಾರತವು ಸೇರಿದಂತೆ ವಿಶ್ವದಾದ್ಯಂತ ಮಹಾಮಾರಿಯಾಗಿ ಹಬ್ಬುತ್ತಿರುವ ಕರೋನ (ಕೊವಿಡ್-19) ದ ಹರಡುವಿಕೆಯನ್ನು ತಡೆಗಟ್ಟಲು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ನಿರಂತರ ಹೋರಾಟ ನಡೆಸುತ್ತಿರುವುದು ಸರಿಯಷ್ಟೆ. ಈ ಸೋಂಕಿನ ಪರಿಣಾಮದಿಂದಾಗಿ ಕರ್ನಾಟಕ ಮತ್ತು ದೇಶ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿದ್ದು, ನಾಡ ನಾಗರಿಕರ ಜೀವ ರಕ್ಷಣೆಗಾಗಿ ಕೊವಿಡ್-19 (ಕರೋನ ವೈರಸ್) ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಸಹಕಾರಿ ಕ್ಷೇತ್ರವು ಕೂಡ ಕೈ ಜೋಡಿಸುವುದು ಹೊಣೆಗಾರಿಕೆಯಾಗಿರುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಆರ್ಥಿಕವಾಗಿ ನೆರವಾಗುವುದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಅರಿತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ಜಮಾ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕರೋನಾ ವೈರಸ್ ಮಹಾಮಾರಿಯಾಗಿದ್ದು ಸ್ವಯಂ ಜಾಗೃತಿಯಿಂದ ಸರ್ಕಾರದ ಜೊತೆ ಕೈ ಜೋಡಿಸುವ 7 ಮುಖಾಂತರ ಮೆಡಿಕಲ್ ಕಿಟ್‌ಗಳು, ಲ್ಯಾಬ್‌ಗೆ ಅಗತ್ಯ ಸಾಮಾಗ್ರಿಯುಳ್ಳ ಔಷಧೋಪಚಾರಕ್ಕೆ ಹಾಗೂ ಸ್ಯಾನಿಟೈಸರ್ ಇನ್ನೂ ಮುಂತಾದ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ನಾವೆಲ್ಲರೂ ಆರ್ಥಿಕವಾಗಿ ಸರ್ಕಾರಕ್ಕೆ ನೆರವಾಗುವ ದೃಷ್ಟಿಯಿಂದ ರಾಬಕೋ ಧರ್ಮಾರ್ಥ ನಿಧಿಯಿಂದ 7,41,587 ರೂ.ಒಕ್ಕೂಟದ ಅಧಿಕಾರಿ ಮತ್ತು ಸಿಬ್ಬಂದಿಗಳ ಒಂದು ದಿನದ ವೇತನ 2,20,373, ಒಕ್ಕೂಟದ ಆಡಳಿತ ಮಂಡಳದ ನಿರ್ದೇಶಕರ ಪ್ರವಾಸ ಭತ್ಯೆ ಹಾಗೂ ದಿನ ಭತ್ಯೆ 38,040 ರೂ. ಸೇರಿದಂತೆ ಒಟ್ಟು 10ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ.
10 ಲಕ್ಷ ರೂ.ಗಳ ಚೆಕ್ ಅನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!