ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. 18 ವರ್ಷದೊಳಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಡಿಎಲ್ ಇಲ್ಲದೇ ಬೈಕ್, ಕಾರು ಚಲಾಯಿಸುತ್ತಿರುವುದು ಟ್ರಾಫಿಕ್ ಪೊಲೀಸರಿಗೆ ಹೊಸ ತಲೆನೋವು ತಂದಿದೆ.
ಡಿಎಲ್ ಇಲ್ಲದೇ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾವಣೆ ಮಾಡಿದ ಪ್ರಕರಣದಲ್ಲಿ ಬೆಂಗಳೂರು ನಗರ ಸಂಚಾರಿ ಪೊಲೀಸರು ಒಂದೇ ದಿನದಲ್ಲಿ 1800 ಪೋಷಕರಿಗೆ ದಂಡ ವಿಧಿಸಿದ್ದಾರೆ.
ಈ ಮಕ್ಕಳು ಡಿ ಎಲ್ ಇಲ್ಲದೇ ಶಾಲಾ-ಕಾಲೇಜಿಗೆ ಬೈಕ್ ಚಲಾಯಿಸಿಕೊಂಡು ಹೋಗಿದ್ದರು. ಈ ವೇಳೆ ತಡೆದ ಪೊಲೀಸರು ಡಿ ಎಲ್ ಹಾಗೂ ಮಕ್ಕಳ ವಯಸ್ಸಿನ ಬಗ್ಗೆ ವಿಚಾರಿಸಿದಾಗ 18 ವರ್ಷದೊಳಿಗಿನವರು ಎಂದು ತಿಳಿದುಬಂದಿದೆ. ಪೊಲೀಸರು ನಗರದ ಸುಮಾರು 150 ಶಾಲೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ವಿದ್ಯಾರ್ಥಿಗಳು ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದ್ದು, ತಕ್ಷಣ ಅವರ ಪೋಷಕರನ್ನು ಕರೆಸಿ ದಂಡ ವಿಧಿಸಿ ವಾಹನಗಳನ್ನು ಮಕ್ಕಳ ಕೈಗೆ ಕೊಡದಂತೆ ತಾಕೀತು ಮಾಡಿದ್ದಾರೆ.