Wednesday, 11th December 2024

ಜಿಲ್ಲೆಯಲ್ಲಿ ಮದುವೆಯಾಗದೆ ಗರ್ಭವತಿಯರಾದ 400 ಮಂದಿ ಹೆಣ್ಣು ಮಕ್ಕಳು: ಕಳವಳ

ತುಮಕೂರು: ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳನ್ನು ಮದುವೆಯಾಗಿ, ಲೈಂಗಿಕ ಸಂಬಂಧವಿಟ್ಟುಕೊಂಡರೆ ಅದು ಅತ್ಯಾಚಾರ ಪ್ರಕರಣವೆಂದು ಪರಿಗಣಿಸಲಾಗುತ್ತದೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ೪೦೦ ಮಂದಿ ಹೆಣ್ಣಮಕ್ಕಳು ಮದುವೆಯಾಗದೆಯೇ ಗರ್ಭಧರಿಸಿದ್ದಾರೆ. ಇವರಲ್ಲಿ ನಾಲ್ಕು ಮಂದಿ ೧೦ ವರ್ಷದ ಮಕ್ಕಳಿರುವುದು ದುರದೃಷ್ಟಕರ ಸಂಗತಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಕಳವಳ ವ್ಯಕ್ತಪಡಿಸಿದರು.
ತುಮಕೂರು ವಿವಿಯು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಲೈಂಗಿಕ ದೌರ್ಜನ್ಯ: ಪೋಕ್ಸೊ ಕಾಯ್ದೆಯಡಿ ತಡೆಗಟ್ಟುವಿಕೆ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜಿಲ್ಲೆಯ ೧೨೫ ಮಂದಿ ಜೈಲುಪಾಲಾಗಿದ್ದಾರೆ. ಪೋಕ್ಸೊ ಕಾಯ್ದೆಯಡಿ ಜಿಲ್ಲಾ ಕಾರಾಗೃಹದಲ್ಲಿರುವವರಲ್ಲಿ ಹೆಚ್ಚಿನ ಮಂದಿ ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳ ತಂದೆ, ಅಣ್ಣ, ಶಿಕ್ಷಕರು, ಸ್ವಾಮೀಜಿಗಳಿದ್ದಾರೆ. ಎರಡೆರಡು ಬಾರಿ ಪೋಕ್ಸೊ ಕಾಯ್ದೆಯಡಿ ಜೈಲು ಪಾಲಾದವರಿದ್ದಾರೆ. ಜಿಲ್ಲೆಯ ಎರಡು ಕುಟುಂಬ ನ್ಯಾಯಾಲಯದಲ್ಲಿ ಒಟ್ಟು ೬೦೦೦ ವಿಚ್ಛೇದನ ಪ್ರಕರಣಗಳು ಚಾಲ್ತಿಯಲ್ಲಿವೆ. ಇವೆಲ್ಲವೂ ಸಮಾಜದ ದುರಂತಗಳು ಎಂದರು.
ಫೇಕ್ ಚ್ಯಾಟ್ ಮಾಡುವುದು, ಫೇಕ್ ಖಾತೆಗಳನ್ನು ಬಳಸುವುದು, ಸಂಬಂಧ ದುರ್ಬಳಕೆ ಮಾಡಿಕೊಂಡು ಖಾಸಗಿ ಚಿತ್ರ, ವಿಡಿಯೊಗಳನ್ನು ಹಂಚುವುದು, ಟ್ರೋಲ್ ಮಾಡುವುದು, ಖಾತೆ ಹ್ಯಾಕ್ ಮಾಡುವುದು, ಖಾಸಗಿ ಬದುಕನ್ನು ಸೂಕ್ಷö್ಮವಾಗಿ ವೀಕ್ಷಿಸಿ, ಬೆದರಿಸುವುದು – ಇವೆಲ್ಲವೂ ಸೈಬರ್ ಅಪರಾಧ ಗಳು. ಅಪರಾಧಿಗಳಿಗೆ ೧೦ ಲಕ್ಷ ದಂಡ, ೭ ವರ್ಷದಿಂದ ೨೦ ವರ್ಷದ ವರೆಗೂ ಸಜೆಯಾಗುತ್ತದೆ ಎಂದು ತಿಳಿಸಿದರು.
ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ನಾಗರಿಕತೆ ಬೆಳೆದಂತೆ ವಿದ್ಯಾವಂತರ ಸಂಖ್ಯೆ ಹೆಚ್ಚಿದಂತೆ, ತಂತ್ರಜ್ಞಾನ, ಆವಿಷ್ಕಾರಗಳಲ್ಲಿ ದೇಶ ಮುಂದುವರಿದAತೆ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಲೇ ಇವೆ. ಮಾನಸಿಕವಾಗಿ ವಿದ್ಯಾವಂತರಾದಲ್ಲಿ, ಕಾನೂನಿನ ಮೇಲೆ ಗೌರವವಿದ್ದಲ್ಲಿ ಅಪರಾಧಗಳು ನಡೆಯುವುದಿಲ್ಲ. ಅಭಿವೃದ್ಧಿಗಾಗಿ ವ್ಯಯಿಸುವ ಹಣವನ್ನು ಅಪರಾಧಗಳ ತಡೆಗಟ್ಟಲು ಬಳಸುತ್ತಿರುವುದು ವಿಷಾದನೀಯ ಎಂದರು.
ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನಕುಮಾರ್, ಪ್ರೊ. ನೂರ್ ಅಫ್ಜಾ, ಪ್ರೊ. ಬಿ. ಕರಿಯಣ್ಣ, ಪ್ರೊ. ಮೊನ್ಬಿಂದರ್ ಕೌರ್, ಪ್ರೊ. ಎ. ಮೋಹನ್ ರಾಮ್, ಡಾ. ಸುನಿತಾ ವಿ. ಗಾಣ ಗೇರ್ ಉಪಸ್ಥಿತರಿದ್ದರು.