Friday, 13th December 2024

42 ಕಡೆ ಜ್ವರ ಚಿಕಿತ್ಸಾ ಕೇಂದ್ರ ಆರಂಭ 

ತುಮಕೂರು: ನಗರ ಸೇರಿದಂತೆ ಜಿಲ್ಲೆಯಲ್ಲಿ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿ.ಪಂ. ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗದ ವತಿಯಿಂದ ನಗರದಲ್ಲಿ ೪೨ ಕಡೆ ಜ್ವರ ಚಿಕಿತ್ಸಾ ಕೇಂದ್ರಗಳನ್ನು ತೆರೆಯುತ್ತಿರುವ ಹಿನ್ನೆಲೆಯಲ್ಲಿ ಮನೆ ಮನೆ ಸರ್ವೆ ಕಾರ್ಯಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಚಾಲನೆ ನೀಡಿದರು.
ನಂತರ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ ಅವರು ಶಾಲೆಯಲ್ಲಿ ಮಕ್ಕಳ ಹಾಜರಾತಿ ಪುಸ್ತಕವನ್ನು ವೀಕ್ಷಿಸಿದರು. ಬಳಿಕ ತರಗತಿಯಲ್ಲಿರುವ ಮಕ್ಕಳನ್ನು ಭೇಟಿ ಮಾಡಿ ಮಾತನಾಡಿಸಿದಾಗ ನಯನ ಎಂಬ ವಿದ್ಯಾರ್ಥಿನಿ ಶಾಲೆಗೆ ಗೈರು ಹಾಜರಾಗಿರುವುದು ತಿಳಿದು ಬಂದಿತು.
ತಕ್ಷಣ ಶಾಲೆಯಲ್ಲಿದ್ದ ಮತ್ತೋರ್ವ ವಿದ್ಯಾರ್ಥಿನಿಯನ್ನು ಜತೆಯಲ್ಲಿ ಗೈರು ಹಾಜರಾಗಿದ್ದ ನಯನ ಎಂಬ ವಿದ್ಯಾರ್ಥಿನಿಯ ಮನೆಗೆ ಜಿಲ್ಲಾಧಿಕಾರಿಗಳು ನಡೆದುಕೊಂಡೆ ಹೋಗಿ ನೋಡಿದಾಗ ಸದರಿ ವಿದ್ಯಾರ್ಥಿನಿ ಜ್ವರದಿಂದ ಬಳಲಿ ಮಲಗಿದ್ದ ದೃಶ್ಯ ಕಂಡು ಬಂದಿತು.
ಜ್ವರದಿ೦ದ ಬಳಲುತ್ತಿದ್ದ ವಿದ್ಯಾರ್ಥಿನಿಯ ತಂದೆ-ತಾಯಿ ಮಗಳಿಗೆ ಮಾತ್ರೆ ತಂದು ಕೊಟ್ಟು ನುಂಗಿಸಿ ಇಬ್ಬರೂ ಕೆಲಸಕ್ಕೆ ಹೋಗಿದ್ದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ನಯನಳನ್ನು ನಿಮ್ಮ ಅಮ್ಮ, ಅಪ್ಪ ಎಲ್ಲಿಗೆ ಹೋಗಿದ್ದಾರೆ ಎಂದು ಕೇಳಿದಾಗ, ಅಮ್ಮ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದಾರೆ, ಅಪ್ಪನೂ ಸಹ ಕೆಲಸಕ್ಕೆ ಹೋಗಿದ್ದಾರೆ. ತಮ್ಮ ನನ್ನನ್ನು ನೋಡಿಕೊಳ್ಳಲು ಶಾಲೆಗೆ ರಜೆ ಹಾಕಿ ಇಲ್ಲಿಯೇ ಇದ್ದಾನೆ ಎಂದು ತಿಳಿಸಿದಳು.
ಈ ಮಾಹಿತಿಯನ್ನು ಪಡೆದ ಜಿಲ್ಲಾಧಿಕಾರಿಗಳು, ತಕ್ಷಣ ವಿದ್ಯಾರ್ಥಿನಿಯ ತಂದೆ-ತಾಯಿಗೆ ದೂರವಾಣಿ  ಕರೆ ಮಾಡಿದರು. ಆದರೆ ಅವರು ಫೋನ್ ಕರೆ ಸ್ವೀಕರಿಸಲಿಲ್ಲ. ನಂತರ  ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ನರ್ಸ್ ಕರೆಸಿ ಸ್ಥಳದಲ್ಲೇ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.
 ಪೋಷಕರು ಬಂದ ಮೇಲೆ ವಿಷಯ ತಿಳಿಸಿ, ಜಿಲ್ಲಾಸ್ಪತ್ರೆಗೆ ಮಗಳನ್ನು ಕರೆದೊಯ್ದು ದಾಖಲಿಸುವಂತೆಯೂ ತಿಳಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು, ನಗರದಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಜ್ವರ ಚಿಕಿತ್ಸಾ ಕೇಂದ್ರಗಳನ್ನು ತೆರೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಜ್ವರ ಇದೆಯೋ, ಇಲ್ಲವೋ ಎಂಬುದನ್ನು ಪತ್ತೆಹಚ್ಚುವ ಕೆಲಸ ಮಾಡಲಿದ್ದಾರೆ ಎಂದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ೪೨ ಸರ್ಕಾರಿ ಆಸ್ಪತ್ರೆಗಳಿವೆ. ಜ್ವರ ಬಂದರೆ ಸಾರ್ವಜನಿಕರು ತಕ್ಷಣ ಆಸ್ಪತ್ರೆಗಳಿಗೆ ತೆರಳಿ ಉಚಿತವಾಗಿ ರಕ್ತದ ತಪಾಸಣೆ ಮಾಡಿಸಬೇಕು. ಜ್ವರ ಕಡಿಮೆಯಾಗದಿದ್ದರೆ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಜನಸಾಮಾನ್ಯರು ಡೆಂಘೀ ಜ್ವರವನ್ನು ಗಂಭೀರವಾಗಿ ಪರಿಗಣ ಸಬೇಕು. ಉದಾಸೀನ ಮಾಡದೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.
ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ ಮಾತನಾಡಿ, ಮಹಾನಗರ ಪಾಲಿಕೆ ವತಿಯಿಂದ ನಗರದಲ್ಲಿ ೪೨ ಕಡೆ ಜ್ವರ ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗುತ್ತಿದೆ. ಮನೆ ಮನೆಗೆ ತೆರಳಿ ಸರ್ವೆ ಮಾಡಿಸಲಾಗುತ್ತಿದೆ. ಪ್ಲೇಟ್ಲೇಟ್ ಕಡಿಮೆಯಾಗುತ್ತಿದ್ದರೆ ಅಂತಹವರು ಆಸ್ಪತ್ರೆಗೆ ದಾಖಲಾಗಿದೆ ಚಿಕಿತ್ಸೆ ಪಡೆಯಬೇಕು. ಮನೆಯ ಮುಂಭಾಗದಲ್ಲಿ ಜ್ವರ ಸಂಗ್ರಹಣೆ ಮಾಡಿಕೊಳ್ಳಬಾರದು. ಯಾರೂ ಸಹ ಭಯಪಡದೆ, ನಿರ್ಲಕ್ಷ÷್ಯ ವಹಿಸದೆ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ನಗರದ ೩೫ ವಾರ್ಡ್ಗಳಲ್ಲೂ ಸಹ ವಾರದಲ್ಲಿ ಎರಡು ಬಾರಿ ಫಾಗಿಂಗ್, ಸ್ಪೈಯಿಂಗ್ ಸಹ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮೀ ಕಾಂತ್, ಪಾಲಿಕೆ ಆರೋಗ್ಯಾಧಿಕಾರಿ ವೀರೇಶ್ ಕಲ್ಲುಮಠ್, ಡಾ. ನವೀನ್ ಹಾಗೂ ಪಾಲಿಕೆ ಸಿಬ್ಬಂದಿ ಮತ್ತಿತರರು ಇದ್ದರು.