Friday, 13th December 2024

ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ 10 ಲಕ್ಷ ಸಹಾಯಧನ: ಶಾಸಕ ಗೌರಿಶಂಕರ್

ತುಮಕೂರು : ಗ್ರಾಮಾಂತರ ನಾಗವಲ್ಲಿ ಗ್ರಾಮದಲ್ಲಿ  ಶಾಸಕರಾದ   ಡಿಸಿ ಗೌರಿಶಂಕರ್ ಅವರ ಅಧ್ಯಕ್ಷತೆಯಲ್ಲಿ ಡಾ. ಶ ಶ್ರೀ ಸಿದ್ದರಾಜು ಮಹಾಸ್ವಾಮಿಗಳ ಹಾಗೂ ಶ್ರೀ ಶ್ರೀ ಪೂರ್ಣಾನಂದಾಭಾರತಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ತುಮಕೂರು ಜಿಲ್ಲಾ ಆದಿಜಾಂಬವ ಶಕ್ತಿ ಸೇನೆ ಗ್ರಾಮೀಣಾಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮವು ಜ್ಯೋತಿ ಬೆಳಗಿಸುವ ಮೂಲಕ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕರು  ತುಮಕೂರು ಜಿಲ್ಲಾ ಆದಿ ಜಾಂಬವ ಶಕ್ತಿ ಸೇನೆ ಗ್ರಾಮೀಣಾಭಿವೃದ್ಧಿ ಸಂಘವು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿ ಎಲ್ಲರಿಗೂ ಅನುಕೂಲ ಮಾಡಿಕೊಡುವಂತೆ ತಿಳಿಸಿ, ತುಮಕೂರು ಜಿಲ್ಲಾ ಕಚೇರಿಯ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸು ವಂತೆ ಈಗಾಗಲೇ ಮಾಜಿ ಪ್ರಧಾನ ಮಂತ್ರಿಗಳಾದ ಎಚ್ ಡಿ ದೇವೇಗೌಡ  ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ವೈಯಕ್ತಿಕವಾಗಿ 10 ಲಕ್ಷ ರು. ಗಳ ದೇಣಿಗೆ ನೀಡುವುದಾಗಿ ತಿಳಿಸಿದ್ದೇನೆ.
ಸಮಾಜದ ಒಳಿತಿಗಾಗಿ ಯಾವುದೇ ರೀತಿಯ ಸಹಕಾರ ನೀಡಲು ಸಿದ್ಧನಿದ್ದು ಎಲ್ಲಾ ಪದಾಧಿಕಾರಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 500ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರವಾಗಿ ವೈಯಕ್ತಿಕವಾಗಿ 10 ಸಾವಿರ ರು.ಗಳನ್ನು ನೀಡಿ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಸುಮಾರು 6000 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗಿಯಾಗಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಯಶಸ್ವಿಗೊಳಿಸಿದರು, ಕಾರ್ಯಕ್ರಮದಲ್ಲಿ ಭಾಗವಹಿಸಿದ 5000ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಸೀರೆ ನೀಡುವ ಮೂಲಕ ಬಾಗಿನ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಆದಿ ಜಾಂಬವ ಶಕ್ತಿ ಸೇನೆ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಬೆಳಗುಂಬ ವೆಂಕಟೇಶ್, ಕಾರ್ಯಾಧ್ಯಕ್ಷರಾದ ಅರಳೂರು ಸುರೇಶ್, ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.