Wednesday, 11th December 2024

ಶಿಥಿಲಾವಸ್ಥೆಯಲ್ಲಿರುವ ಶಾಲೆ, ಅಂಗನವಾಡಿ ನೆಲಸಮಕ್ಕೆ ಸಿಇಓ ಸೂಚನೆ 

ತುಮಕೂರು: ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲೆ ಹಾಗೂ ಅಂಗನವಾಡಿ ಕೊಠಡಿ, ಶೌಚಾಲಯಗಳನ್ನು ನೆಲಸಮ ಮಾಡಲು ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು ಮಕ್ಕಳಿಗೆ ಪಾಠ ಮಾಡಲು ಯೋಗ್ಯ ವಿಲ್ಲದ, ದುಸ್ಥಿತಿಯಲ್ಲಿರುವ ಕೊಠಡಿಗಳನ್ನು ನೆಲಸಮ ಮಾಡಲು ಜಿಲ್ಲಾ ಪಂಚಾಯತಿ ಅನುಮೋದನೆ ಪಡೆದ ನಂತರ ಕ್ರಮವಹಿಸಬೇಕೆಂದು ಅವರು ನಿರ್ದೇಶಿಸಿದರು.
ಮಕ್ಕಳಿಗೆ ಪಾಠ ಮಾಡುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದುಸ್ಥಿತಿಯಲ್ಲಿರುವ ಕೊಠಡಿಗಳ ನೆಲಸಮಕ್ಕೆ ಜಿಲ್ಲಾ ಪಂಚಾಯತ್ ಮುಂದಾಗಿದೆ.  ಮಳೆಗಾಲ ವಿರುವುದರಿಂದ ಸಂಬಂಧಿಸಿದ ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿ ದುರಸ್ತಿಪಡಿಸಲಾಗದ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ನೆಲಸಮ ಮಾಡುವ ಕಾರ್ಯವನ್ನು ವಿಳಂಬ ಮಾಡದೆ ಬರುವ ಸೆಪ್ಟೆಂಬರ್ ಮಾಹೆಯೊಳಗಾಗಿ ಪೂರ್ಣಗೊಳಿಸಬೇಕು. ನೆಲಸಮ ಮಾಡಿದ ಕೊಠಡಿಗಳ ತ್ಯಾಜ್ಯವನ್ನು ಉಳಿಸದೆ ಶಾಲಾ ಆವರಣದಿಂದ ಕೂಡಲೇ ತೆರವುಗೊಳಿಸಬೇಕೆಂದು ನಿರ್ದೇಶನ ನೀಡಿದರು.
ನೆಲಸಮಗೊಳಿಸುವ ಮುನ್ನ ಶಿಥಿಲ ಕೊಠಡಿಗಳ ಸ್ಥಿತಿ-ಗತಿಯ ಛಾಯಾಚಿತ್ರ ಹಾಗೂ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದರಲ್ಲದೆ, ಶಾಲೆಗಳಲ್ಲಿ ಮಕ್ಕಳ ಅನುಭವಾತ್ಮಕ ಕಲಿಕೆ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರ ಕಾರ್ಯಕ್ಷಮತೆ ಹೆಚ್ಚಿಸಲು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ಡಿಡಿಪಿಐಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಉತ್ತಮಗೊಳಿಸುವ ದೃಷ್ಟಿಯಿಂದ ಶಿಕ್ಷಕರಿಗೆ ಈ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಪಠ್ಯಬೋಧನಾ ಕ್ರಮ, ಮಕ್ಕಳ ಕಲಿಕೆಗೆ ಉತ್ತೇಜನ, ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹಾಗೂ ಸೃಜನಶೀಲತೆಯನ್ನು ಹೆಚ್ಚಿಸಲು ಅಳವಡಿಸಿಕೊಳ್ಳಬೇಕಾದ ವಿಧಾನಗಳ ಬಗ್ಗೆ ಶಿಕ್ಷಕರಿಗೆ ವಸತಿ ತರಬೇತಿ ನೀಡಲು ಎಲ್ಲಾ ಸಿದ್ಧತೆ ಕೈಗೊಳ್ಳಬೇಕೆಂದು ತಿಳಿಸಿದರಲ್ಲದೆ, ಎಸ್.ಎಸ್.ಎಲ್.ಸಿ. ಫಲಿತಾಂಶ ಕಳಪೆ ಮಟ್ಟದಲ್ಲಿರುವ ಅನುದಾನಿತ ಶಾಲೆಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳಬೇಕು.  ಕರ್ತವ್ಯ ನಿರ್ಲಕ್ಷ ತೋರುವ ಶಿಕ್ಷಣ ಇಲಾಖೆ ಅಧಿಕಾರಿ,ಸಿಬ್ಬಂದಿಗಳನ್ನು ಮುಲಾಜಿಲ್ಲದೆ ಅಮಾನತ್ತು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.
ಜಿಲ್ಲೆಯ ಪಾವಗಡ ತಾಲ್ಲೂಕಿನ ಕೆಲವು ಶಿಕ್ಷಕರು ಶಾಲೆಗಳಿಗೆ ಕುಡಿದು ಬಂದು ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ಪೋಷಕರಿಂದ ದೂರುಗಳು ಬರುತ್ತಿವೆ.  ಶಿಕ್ಷಕರು ಮಕ್ಕಳಿಗೆ ಮಾದರಿಯಾಗಿರಬೇಕು. ಶಾಲೆಗೆ ಗೌರವ ಯುತವಾಗಿ ಆಗಮಿಸಬೇಕು.  ಶಾಲೆಯಲ್ಲಿ ಅಶಿಸ್ತು ತೋರುವ ಶಿಕ್ಷಕರ ಪಟ್ಟಿ ಮಾಡಿ ತಮಗೆ ಸಲ್ಲಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.  ಶಾಲೆಯಲ್ಲಿ ಅಶಿಸ್ತು ತೋರುವ ಶಿಕ್ಷಕರನ್ನು ಕಠಿಣ ಕ್ರಮಕ್ಕೆ ಗುರಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಲ್ಲಿ ಸುವ್ಯವಸ್ಥೆಯ ಕೊಠಡಿ ಹಾಗೂ ಶೌಚಾಲಯ, ಶಾಲಾ ಆವರಣ ಗೋಡೆ, ಆಟದ ಮೈದಾನ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಅವಶ್ಯವಿರುವ ಕಡೆ ಹೊಸ ಶಾಲಾ ಕೊಠಡಿಯನ್ನು ನಿರ್ಮಾಣ ಮಾಡಬೇಕೆಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ತುಮಕೂರು ಹಾಗೂ ಮಧುಗಿರಿ)ರುಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ವಿವೇಕ ಯೋಜನೆಯಡಿ ಮಂಜೂರಾಗಿರುವ ೩೬೦ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಯನ್ನು ೨೦೨೫ರ ಜನವರಿ ಮಾಹೆಯೊಳಗಾಗಿ ಪೂರ್ಣಗೊಳಿಸಬೇಕು. ಪೂರ್ಣಗೊಳಿಸದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಆಯಾ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ವಿವೇಕ ಶಾಲೆಗಳ ಕಾಮಗಾರಿ ಗುಣಮಟ್ಟ ಹಾಗೂ ಪ್ರಗತಿಯನ್ನು ಪರಿಶೀಲಿಸಬೇಕು. ಸರ್ಕಾರದಿಂದ ಅನುದಾನ ಒದಗಿಸಿದ್ದರೂ ಮೌಲ್ಯಯುತ ಬಳಕೆ ಮಾಡದೆ ಕೆಲವು ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ.  ಕೆಲಸ ಮಾಡಲು ಆಸಕ್ತಿ ಇರದ ಅಧಿಕಾರಿಗಳು ಜಿಲ್ಲೆಯಿಂದ ವರ್ಗಾವಣೆಯಾಗಿ ಹೋಗಬೇಕೆಂದು ತಾಕೀತು ಮಾಡಿದರು.
ದಕ್ಷಿಣ ಶೈಕ್ಷಣ ಕ ಜಿಲ್ಲೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮನಮೋಹನ್ ಮಾತನಾಡಿ, ೨೦೨೪-೨೫ನೇ ಸಾಲಿನಲ್ಲಿ ವಿವೇಕ ಯೋಜನೆಯಡಿ ಜಿಲ್ಲೆಯ ಎರಡೂ ಶೈಕ್ಷಣ ಕ ಜಿಲ್ಲೆಗಳಲ್ಲಿ ೫೪.೬೨ ಕೋಟಿ ರೂ. ವೆಚ್ಚದಲ್ಲಿ ಒಟ್ಟು ೪೭೯ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಹಾಗೂ  ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ೯೫೩ ಶಾಲಾ ಕೊಠಡಿಗಳ ದುರಸ್ತಿಗಾಗಿ ೧೯.೦೬ ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು ೧೧೬೧ ಶಾಲೆಗಳಲ್ಲಿ ಆವರಣ ಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ೮೭೪ ಶೌಚಾಲಯ, ೯೪೫ ಆಟದ ಮೈದಾನಗಳ ಅವಶ್ಯವಿದೆ. ಶಿಥಿಲಾವಸ್ಥೆಯಲ್ಲಿರುವ ೧೦೮೭ ಕೊಠಡಿ ಗಳನ್ನು ನೆಲಸಮಗೊಳಿಸಲು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಜಿಲ್ಲೆಯಲ್ಲಿ ೨೬೫೭ ಪ್ರಾಥಮಿಕ ಹಾಗೂ ೧೯೬ ಪ್ರೌಢಶಾಲೆಗಳ ಆಸ್ತಿ ನೋಂದಣಿಯಾಗಿದ್ದು, ಉಳಿದಂತೆ ೫೮೨ ಪ್ರಾಥಮಿಕ ಹಾಗೂ ೩೧ ಪ್ರೌಢಶಾಲೆಗಳ ಆಸ್ತಿಗಳನ್ನು ನೋಂದಣ  ಮಾಡಬೇಕಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮಧುಗಿರಿ ಡಿಡಿಪಿಐ ಗಂಗಾಧರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಲಸಿದ್ಧಪ್ಪ ಪೂಜೇರಿ, ಸಣ್ಣ ಮಸಿಯಪ್ಪ, ಪಂಚಾಯತ್ ರಾಜ್ಇಂಜಿನಿಯರಿ0ಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ತಿಮ್ಮರಾಯಪ್ಪ, ವಿವಿಧ ತಾಲ್ಲೂಕಿನ ನರೇಗಾ ಯೋಜನೆಯ ಸಹಾಯಕ ನಿರ್ದೇಶಕರು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರುಗಳು, ಮತ್ತಿತರರು ಹಾಜರಿದ್ದರು.