ಬೆಂಗಳೂರು: ನಟಿ, ನಿರೂಪಕಿ ಅಪರ್ಣಾ ವಸ್ತಾರೆ(58) ಅವರು ಗುರುವಾರ ರಾತ್ರಿ ವಿಧಿವಶರಾಗಿದ್ದಾರೆ.
ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ 9.45 ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿ ಮೂಲದವರಾಗಿದ್ದರು. ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.
ಅಪರ್ಣಾ ಅವರು ದೂರದರ್ಶನದಲ್ಲಿ ನಿರೂಪಕಿಯಾಗಿ, ರೇಡಿಯೋ ಜಾಕಿಯಾಗಿ ಕನ್ನಡದ ಜನಪ್ರಿಯ ಮುಖವಾಗಿದ್ದರು. 1990 ರ ದಶಕದಲ್ಲಿ ದೂರ ದರ್ಶನದಲ್ಲಿ ದಲ್ಲಿ ಪ್ರಸಾರವಾದ ವಿವಿಧ ಕಾರ್ಯಕ್ರಮಗಳ ನಿರೂಪಕಿಯಾಗಿ ಕೆಲಸ ಮಾಡಿದ್ದರು . 1984 ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ಕೊನೆಯ ಚಿತ್ರ ಮಸಣದ ಹೂವು ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 2015 ಮತ್ತು 2021 ರ ನಡುವೆ ಕಾಮಿಡಿ ಶೋ, ಮಜಾ ಟಾಕೀಸ್‌ನಲ್ಲಿ ವರಲಕ್ಷ್ಮಿ ಪಾತ್ರವನ್ನು ನಿರ್ವಹಿಸಿಯೂ ಜನಪ್ರಿಯರಾಗಿದ್ದರು.
ಅಪರ್ಣಾ ಅವರು ಮೂಡಲ ಮನೆ ಮತ್ತು ಮುಕ್ತ ಮುಂತಾದ ದೂರದರ್ಶನ ಕಾರ್ಯಕ್ರಮಗಳಲ್ಲಿ ನಟಿಯಾಗಿ ಕೆಲಸ ಮಾಡಿದ್ದಾರೆ . 2013 ರಲ್ಲಿ, ಅವರು ETV ಕನ್ನಡದಲ್ಲಿ ಪ್ರಸಾರವಾದ ಕನ್ನಡ ರಿಯಾಲಿಟಿ ಟೆಲಿವಿಷನ್ ಶೋ ಬಿಗ್ ಬಾಸ್‌ನ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.
ಅಪರ್ಣಾ ಪತಿ ನಾಗರಾಜ್ ಭಾವುಕರಾಗಿ ಹೇಳಿಕೆ ನೀಡಿದ್ದು, 2 ವರ್ಷದ ಹಿಂದೆ ಜುಲೈ ನಲ್ಲಿ ಕ್ಯಾನ್ಸರ್ ಎಂದು ತಿಳಿಯಿತು. ಮೊದಲು ನೋಡಿದ ವೈದ್ಯರು ಆರು ತಿಂಗಳೇ ಬದುಕುವುದು ಕಷ್ಟ ಎಂದಿದ್ದರು. ಆಕೆ ಛಲಗಾತಿ. ಒಂದೂವರೆ ವರ್ಷ ಹೋರಾಡಿದಳು. ಅವಳು ಧೀರೆ ಹೋರಾಡಿ ಸೋತಳು. ದೇಹ ಎನ್ನುವುದು ಮಾಯಕ. ನಿಜವಾದ ವಯಸ್ಸು ಯಾವಾಗಲೂ ತೋರಿಸಿಲ್ಲ. ನಮ್ಮ ಖಾಸಗಿ ವಿಚಾರವಾಗಿತ್ತು. ಇದನ್ನು ಮಾಧ್ಯಮದ ಎದುರು ಹೇಳಬೇಕೆಂಬುದು ಆಕೆಯ ಕೊನೆಯಾಸೆ ಯಾಗಿತ್ತು ಎಂದು ಹೇಳಿದರು.
”ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ.ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸು ತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ಪೋಸ್ಟ್ ಮಾಡಿದ್ದಾರೆ.
‘ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಹಾಗೂ ಕಲಾವಿದೆ ಅಪರ್ಣಾ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ನಿರೂಪಕಿಯಾಗಿ ಮಾತ್ರವಲ್ಲದೇ ನಟಿಯಾಗಿ ಕೂಡ ಗುರುತಿಸಿಕೊಂಡು, ಕಿರುತೆರೆಯಲ್ಲಿ ಮೂಡಿಬಂದ ‘ಮೂಡಲಮನೆ’, ‘ಮುಕ್ತ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದ ಕಲಾವಿದೆ ಅಪರ್ಣಾ ಅವರು ಬಹುಬೇಗ ಇಹಲೋಕ ತ್ಯಜಿಸಿರುವುದು ನೋವಿನ ಸಂಗತಿ. ಮೃತ ಅರ್ಪಣಾ ಅವರ ಕುಟುಂಬ ವರ್ಗದವರಿಗೆ ಭಗವಂತನು ಅಗಲಿಕೆಯ ನೋವು ಸಹಿಸುವ ಶಕ್ತಿ ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಕ್ಸ್ ಪೋಸ್ಟ್ ಮಾಡಿದ್ದಾರೆ.