ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು
ಸಾಕ್ಷ್ಯಾಧಾರ ಕೊಡಲು ತಾಕೀತು
ತುಮಕೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆಗಲೂ ಎಡಿಜಿಪಿ ಕೇಡರ್ ಅಧಿಕಾರಿಗಳ ಕೈಚಳಕ ಇತ್ತು ಎಂಬ ಬಗ್ಗೆ ಸಾಬೀತಾಗಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸಿದ್ದರಾಮಯ್ಯ ನವರ ಸರಕಾರ ಎಫ್ಐಆರ್ ದಾಖಲಿಸಿತ್ತು. ಆದರೆ ಚರ‍್ಜ್ ಶೀಟ್ ಹಾಕದೆ ಸಗಣಿ ಸಾರಿಸುವ ಕೆಲಸ ಮಾಡಿದ್ದರು. ಆದರೆ ನಾವು ಅವರಂತೆ ಸಗಣಿ ಸಾರಿಸುವ ಕೆಲಸ ಮಾಡದೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ. ಹಾಗಾಗಿ ಕಾಂಗ್ರೆಸ್ನವರಿಗೆ ನಮ್ಮ ಸರಕಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.
ಸರಳ ವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ ಅವರ ಹಳೇ ಉದ್ಯೋಗಿಗಳಿಂದಲೇ ನಡೆದಿದೆ. ಇದೊಂದು ಅಮಾನುಷ್ಯ ಕೃತ್ಯ ವಾಗಿದ್ದು, ಆರೋಪಿಗಳ ವಿಚಾರಣೆ ಮುಂದು ವರೆದಿದೆ. ತಮ್ಮ ಸಂಸ್ಥೆಯಿಂದ ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಹಾಗಾಗಿ ಅದೇ ದ್ವೇಷದಿಂದ ಬಂದು ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗುತ್ತಿದೆ ಎಂದು ಅವರು ಹೇಳಿದರು.
ಪಿಎಸ್ಐ ನೇಮಕಾತಿ ಹಗರಣ: ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದAತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸಿಐಡಿ ತಂಡವನ್ನು ಅಭಿನಂದಿಸಬೇಕಿತ್ತು. ಆದರೆ ಅವರು ಅದನ್ನು ಬಿಟ್ಟು ರಾಜಕೀಯ ಲಾಭ ಪಡೆಯಲು ಹೊರಟಿ ದ್ದಾರೆ. ಸಚಿವರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ ಹಾಗೂ ವಿಜಯೇಂದ್ರರವರ ಹೆಸರನ್ನು ಸಿದ್ದರಾಮಯ್ಯ ಅವರು ಯಾವುದೇ ದಾಖಲಾತಿ ಇಲ್ಲದೆ ಹೇಳುವ ಮೂಲಕ ಅವರ ಚಾರಿತ್ರ‍್ಯ ಹರಣ ಮಾಡಿ ದೊಡ್ಡವರಾಗಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ನಾನು ವಿರೋಧ ಪಕ್ಷದ ನಾಯಕರಿಗೆ ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ. ನಿಮ್ಮ ಬಳಿ ಸಾಕ್ಷ್ಯಾಧಾರ ಇದ್ದರೆ ಕೊಡಿ, ನೀವು ಸಾಕ್ಷ್ಯಾಧಾರ ಕೊಟ್ಟರೂ ನಾವು ಕ್ರಮ ಕೈಗೊಳ್ಳದಿದ್ದರೆ ಆಮೇಲೆ ಮಾತನಾಡಿ. ಸುಖಾ ಸುಮ್ಮನೆ ಈ ರೀತಿ ಆಧಾರ ರಹಿತ ಆರೋಪ ಮಾಡಬೇಡಿ ಎಂದರು.
ವಿನಾ ಕಾರಣ ಆರೋಪ ಮಾಡುವ ಬದಲು ಸಾಕ್ಷ್ಯಾಧಾರ ಕೊಡಿ ಎಂದು ಹೇಳಿದರೂ ಅವರು ಕೊಡಲು ಮಾತ್ರ ಮುಂದೆ ಬರುತ್ತಿಲ್ಲ. ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ0ತೆ ಗುಲ್ರ‍್ಗಾದಲ್ಲಿ ಕಾಂಗ್ರೆಸ್ ಮುಖಂಡ ಆರ್.ಡಿ. ಪಾಟೀಲ್ ಎಂಬುವರನ್ನು ಮೊದಲು ಬಂಧಿಸಿದ್ದು. ಆತನೇ ಈ ಪ್ರಕರಣದ ಕಿಂಗ್ ಪಿನ್ ಎಂದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್, ಉಪವಿಭಾಗಾಧಿಕಾರಿ ಅಜಯ್, ಬ್ಯಾಟರಂಗೆಗೌಡ ಇದ್ದರು.