ಉಡುಪಿ: ವಿದ್ವಾಂಸ ಬಿ.ಎ.ವಿವೇಕ ರೈ ಅವರನ್ನು 2022ನೇ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ಕೊಡ ಮಾಡುವ ಟಿ.ವಿಮಲಾ ವಿ.ಪೈ ಪ್ರಾಯೋಜಿತ ಪ್ರಶಸ್ತಿಯನ್ನು ಟಿ.ವಿ.ಮೋಹನ್‌ದಾಸ್ ಪೈ ಸ್ಥಾಪಿಸಿದ್ದು, ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಪುಣಚ ಗ್ರಾಮದಲ್ಲಿ 1946ರಲ್ಲಿ ಜನಿಸಿದ ಡಾ. ಬಿ.ಎ.ವಿವೇಕ ರೈ ಮೈಸೂರು ವಿವಿಯ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದು, ಜಾನಪದ ವಿಷಯದಲ್ಲಿ ಪಿಎಚ್.ಡಿ ಪಡೆದಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರೂ ಆಗಿದ್ದರು. ಕನ್ನಡದಲ್ಲಿ 24 ಕೃತಿಗಳನ್ನು ರಚಿಸಿದ್ದು, ತುಳುವಿನಲ್ಲಿ 2, ಇಂಗ್ಲೀಷ್ ನಲ್ಲಿ 6 ಕೃತಿಗಳನ್ನು ರಚಿಸಿದ್ದಾರೆ.