Saturday, 23rd November 2024

ಶ್ರೀರಾಮುಲು ಸಾಂದರ್ಭಿಕ ಸಚಿವ: ಬಿ.ಆರ್. ಪಾಟೀಲ್

B Sriramulu

ಕಲಬುರಗಿ: ಸಚಿವ ಶ್ರೀರಾಮುಲು ರಾಜ್ಯ ನಾಯಕನಲ್ಲ. ಅವರು ಸಾಂದರ್ಭಿಕವಾಗಿ ಸಚಿವರಾಗಿದ್ದಾರೆ. ಹೊರತು ಮಂತ್ರಿ ಆದವರೆಲ್ಲರೂ ನಾಯಕರಾಗಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಉತ್ಸವ ಮೂರ್ತಿಯಾಗುತ್ತಾರೆ ಎಂಬ ಸಚಿವ ಶ್ರೀರಾಮುಲು ಅವರ ಹೇಳಿಕೆಗೆ ತಿರುಗೇಟು ನೀಡಿ, ಶ್ರೀರಾಮುಲು ಅವರಿಗೆ ಎಷ್ಟು ತಿಳಿದಿದೆ ಅಷ್ಟೇ ಹೇಳುತ್ತಾರೆ. ಸಿದ್ದರಾಮಯ್ಯ ಅವರು ಸಿದ್ಧಾಂತದಲ್ಲಿ ಎಲ್ಲಿಯೂ ಕೂಡ ರಾಜಿ ಮಾಡಿಕೊಂಡವರಲ್ಲ. ಅಮೃತ ಮಹೋತ್ಸವ ಆಚರಣೆ ಅವರ ಅಭಿಮಾನಿಗಳು, ಬೆಂಬಲಿಗರು ಹಾಗೂ ಹಿತೈಷಿಗಳ ನಿರ್ಧಾರವಾಗಿದೆ ಎಂದರು.

ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮದ ವೇದಿಕೆಯನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು ಪಕ್ಷದ ಶಕ್ತಿ ಪ್ರದರ್ಶನ ಮಾಡಲು ನಿರ್ಧರಿಸಲಾಗುತ್ತದೆ. ಖುದ್ದು ಕೆಪಿಸಿಸಿ ಅಧ್ಯಕ ಡಿ.ಕೆ.ಶಿವಕುಮಾರ ಅವರೇ, ಸಿದ್ದರಾಮಯ್ಯ ಅವರ ಮನೆಗೆ ಹೋಗಿ ಒಪ್ಪಿಸಿದ ಬಳಿಕ ಕಾರ್ಯಕ್ರಮ ಅಯೋಜನೆಗೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ತೀರ್ಮಾ ಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜು.21 ರಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಹಾಜರು ಪಡಿಸಲಾಗುತ್ತಿದೆ. ಹೀಗಾಗಿ, ಅಂದು ಅವರಿಗೆ ನೈತಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಹಾಗೂ ಪಕ್ಷದ ಶಕ್ತಿ ಪ್ರದರ್ಶನ ತೋರಲು ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಖರ್ಗೆ ಅವರು ನಿರ್ಧರಿಸಿದ್ದಾರೆ ಸ್ಪಷ್ಟ ಪಡಿಸಿದರು.

ರಾಜಕೀಯದಲ್ಲಿ ಜಾತಿ ರಾಜಕಾರಣ ಸ್ವಾಭಾವಿಕವಾಗಿದೆ. ಒಕ್ಕಲಿಗ ಸಮುದಾಯದ ಕಾರ್ಯಕ್ರಮದ ಸಂದರ್ಭದಲ್ಲಿ ಡಿ. ಕೆ ಶಿವಕುಮಾರ್ ಅವರು ತಮ್ಮ ಒಕ್ಕಲಿಗ ಸಮುದಾಯದ ಬೆಂಬಲ ಕೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಸ್ಪರ್ಧೆ ಇಲ್ಲ ಎಂದು ಬಿ.ಆರ್. ಪಾಟೀಲ್ ಹೇಳಿದರು.