Wednesday, 11th December 2024

Banned Plastic Seize: 17 ಬಾರ್ ಮೇಲೆ ದಾಳಿ, 110 ಕೆಜಿ ನಿಷೇಧಿತ ಪ್ಲಾಸ್ಟಿಕ್ ವಶ

ನಗರಸಭೆ ಪರಿಸರ ಅಭಿಯಂತರ ಉಮಾಶಂಕರ್ ನೇತೃತ್ವದಲ್ಲಿ ದಾಳಿ: ಬರೋಬ್ಬರಿ 48500 ದಂಡ ವಸೂಲಿ

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ನಗರಸಭೆ ಅಧಿಕಾರಿಗಳು ದಿನವೀಡಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮಾಲೀಕರಿಗೆ ದಂಡ ವಿಧಿಸಿ ನೂರಾರು ಕೆಜಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರಸಭೆ ಆರೋಗ್ಯ ಶಾಖೆಯ ಅಧಿಕಾರಿಗಳು ನಗರಸಭೆಯ ಪರಿಸರ ಅಭಿಯಂತರರಾದ ಉಮಾಶಂಕರ್ ನೇತೃತ್ವ ದಲ್ಲಿ ನಗರದ ವಿವಿಧಡೆ ಇರುವ ಬಾರ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿದ್ದು ಈ ವೇಳೆ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ಅಕ್ರಮವಾಗಿ ಬಾರ್ ಮಾಲೀಕರು ಬಳಕೆ ಮಾಡುತ್ತಿರುವುದನ್ನು ನಗರಸಭೆ ಅಧಿಕಾರಿಗಳ ತಂಡ ಪತ್ತೆ ಮಾಡಿದೆ.

110 ಕೆಜಿ ಪ್ಲಾಸ್ಟಿಕ್ ವಶ: ನಗರಸಭೆ ಅಧಿಕಾರಿಗಳು ಬಜಾರ್ ರಸ್ತೆ, ಗಂಗಮ್ಮ ಗುಡಿ ರಸ್ತೆ, ಬಿಬಿ ರಸ್ತೆ, ಎಂಜಿ ರಸ್ತೆ, ಸಂತೆ ಮಾರುಕಟ್ಟೆ ಸೇರಿದಂತೆ ಬರೋಬ್ಬರಿ 17 ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ ಒಟ್ಟು 110 ಕೆಜಿ ನಿಷೇದಿತ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡಿರುವ ಅಧಿಕಾರಿಗಳು ಒಟ್ಟು 48500 ರೂ, ದಂಡ ವಸೂಲಿ ಮಾಡುವ ಮೂಲಕ ಬಾರ್ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.

ನಗರಸಭೆ ಅಧಿಕಾರಿಗಳ ತಂಡ ಭೇಟಿ ನೀಡಿದಾಗ ರಾಶಿ ರಾಶಿ ಪ್ಲಾಸ್ಟಿಕ್ ಕವರ್‌ಗಳು ಬಳಕೆ ಆಗಿರುವುದು ಒಂದಡೆ ಯಾದರೆ ಮತ್ತೊಂದು ಕಡೆ ಬಳಕೆ ಮಾಡಿ ಬಿಸಾಡಿದ್ದ ಅಪಾರ ಪ್ಲಾಸ್ಟಿಕ್ ವಸ್ತುಗಳು ಬಾರ್ ಹಾಗೂ ರೆಸ್ಟೋರೆಂಟ್‌ ಗಳ ಹಿಂಭಾಗ ರಾಶಿ ರಾಶಿ ಬಿದ್ದು ಅನೈರ್ಮಲ್ಯದ ತಾಣಗಳಾಗಿದ್ದು ಕಂಡು ಬಂದಿದೆ.

ಇದನ್ನೂ ಓದಿ: #BagalkotCrime