Tuesday, 15th October 2024

ಸಾಂಸ್ಕೃತಿಕ ಸಂಸ್ಥೆಗಳು ಕಾರ್ಪೋರೇಟ್ ಸಂಸ್ಥೆಗಳಂತೆ ಯಾಂತ್ರೀಕೃತವಾಗಬಾರದು: ಬರಗೂರು

ತುಮಕೂರು: ನಗರದ ಕನ್ನಡ ಭವನದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಾರ್ಷಿಕೋತ್ಸವ, ಹಾಗೂ ಸಾಹಿತ್ಯ ಶ್ರೀ ದತ್ತಿ ಹಾಗೂ ಮಾಧ್ಯಮ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ, ಸಾಂಸ್ಕೃ ತಿಕ ಸಂಸ್ಥೆಗಳು ಕಾರ್ಪೋರೇಟ್ ಸಂಸ್ಥೆ ಗಳಂತೆ ಯಾಂತ್ರೀಕೃತವಾಗದೆ, ರಾಜಪ್ರಭುತ್ವದ ಸಿಂಹಾಸನಗಳಾಗದೆ, ವಿಧಾನಸೌದದ ಕುರ್ಚಿಗಳಾಗದೆ ಪಂಪನ ಅಧಿಕಾರ ನಶ್ವರತೆ, ಬಸವಣ್ಣನವರ ಆತ್ಮನಿವೇದನೆ, ಅಕ್ಕಮಹಾದೇವಿಯ ಪ್ರತಿರೋಧ, ಆತ್ಮವಿಶ್ವಾಸದ ಗುಣವನ್ನು ಅಳವಡಿಸಿಕೊಂಡರೆ ಸಾಂಸ್ಕೃತಿಕ ಕ್ಷೇತ್ರದಿಂದ ಏನಾದರೂ ಬದಲಾವಣೆ ತರಲು ಸಾಧ್ಯ. ಸಾಂಸ್ಕೃತಿಕ ಕ್ಷೇತ್ರವನ್ನು ಅಧಿಕಾರವೆಂದು ಭಾವಿಸುವವರು ಕನ್ನಡ ಸಾಹಿತ್ಯದ ತಿಳುವಳಿಕೆ ವಿರೋಧಿಗಳೆಂದೇ ವ್ಯಾಖ್ಯಾನಿಸಬೇಕಾಗುತ್ತದೆ ಎಂದರು.
ಪ್ರಭುತ್ವದ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಪ್ರವೃತ್ತಿ ಹೆಚ್ಚುತ್ತಿರುವ ಈ ದಿನಗಳಲ್ಲಿ ಕುವೆಂಪು ವಿರಚಿತ ನಾಡಗೀತೆಯಲ್ಲಿ ಬರುವ ಸರ್ವಜನಾಂಗದ ಶಾಂತಿಯ ತೋಟದ ಸಾಮರಸ್ಯದ ಆಶಯಗಳ ಅರಿವನ್ನು ಪ್ರತಿಯೊಬ್ಬರಲ್ಲಿ ಮೂಡಿಸುವ ಅಗತ್ಯವಿದೆ.
ಕೋಗಿಲೆಯ ಮರಿಯನ್ನು ತನ್ನ ಮರಿಯಂತೆ ಕಾವುಕೊಟ್ಟು ಬೆಳೆಸುವ ಕಾಗೆಯ ಕಾರುಣ್ಯ ನಮ್ಮದಾಗಬೇಕಿದೆ. ಸಾಂಸ್ಕೃತಿಕ ಸಂಘಗಳಿಗೆ ತಂತ್ರಜ್ಞಾನಕ್ಕಿAತ ತತ್ವಜ್ಞಾನ ಮುಖ್ಯ. ಇನ್ನೂ ಮುಂದೆ ಕನ್ನಡದ ಯಾವುದೇ ಕಾರ್ಯಕ್ರಮಗಳಲ್ಲಿ ನಾಡಗೀತೆ ಯನ್ನು ಕ್ಯಾಸೆಟ್‌ನಲ್ಲಿ ಹಾಡಿಸದೆ, ಸಭಿಕರ ಬಾಯಿಂದಲೇ ಹಾಡಿಸುವ ಕಾರ್ಯವಾಗಬೇಕು ಎಂದು ಸಲಹೆ ನೀಡಿ, ದತ್ತಿ ಪುರಸ್ಕೃತರು ಹಾಗೂ ಕಸಾಪ ಅಧ್ಯಕ್ಷರು ಪದಾಧಿ ಕಾರಿಗಳಿಗೆ ಶುಭ ಕೋರಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಕಸಾಪ ವಾರ್ಷಿಕ ಚಟುವಟಿಕೆಗಳ ಕಿರುನೋಟ ನುಡಿಹೆಜ್ಜೆ-1 ಬಿಡುಗಡೆಗೊಳಿಸಿ ಮಾತನಾಡಿ ಮಾನವೀಯ, ಅಂತಃಕರಣ ಮೌಲ್ಯಗಳನ್ನು ಹೆಚ್ಚಿಸುವುದೇ ಸಾಹಿತ್ಯದ ಗುರಿಯಾಗಿದೆ. ಅಕ್ಷರ ಸಂಸ್ಕೃತಿಯೇ ಸಮಾಜದ ತಳಸ್ತರದವರಿಗೆ ಮರೀಚಿಕೆಯಾಗಿದ್ದ ಸಂದರ್ಭದಲ್ಲಿ ಬಸವಾದಿ ಶರಣರು ನೀಡಿದ ವಚನ ಜೀವನಕ್ಕೆ ದಾರಿದೀಪವಾಗಿದ್ದು, ಎಲ್ಲಾ ಸಾಹಿತ್ಯ ಪ್ರಕಾರದವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಜಿಲ್ಲಾ ಕಸಾಪ ಉತ್ತಮ ಕಾರ್ಯ ಚಟುವಟಿಕೆ ನಡೆಸುತ್ತಿದೆ ಎಂದು ಶ್ಲಾಘಿಸಿದರು.
ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಸಮ್ಮೇಳನ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ ಕನ್ನಡ ಭಾಷೆಯ ಜ್ಞಾನವೇ ಇಂದಿನ ಪೀಳಿಗೆಯಲ್ಲಿ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಅರಿವು ಮೂಡಿಸಲು ಸಾಹಿತ್ಯ ಚಟುವಟಿಕೆಗಳು ಹೆಚ್ಚೆಚ್ಚು ನಡೆಯ ಬೇಕಿದೆ. ಚಿಂತಕರಾದ ನಾಡೋಜ ಬರಗೂರು ಅವರು ಬರುತ್ತಾರೆಂಬ ಕಾರಣಕ್ಕೆ ಸಭಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆಂದರೆ ಅವರಲ್ಲಿರುವ ಜ್ಞಾನ, ವಿವೇಕಕ್ಕಿರುವ ಮಹತ್ವಕ್ಕೆ ಸಾಕ್ಷಿ. ಸಿದ್ದಲಿಂಗಪ್ಪ ಅವರ ತಂಡ ಕ್ರಿಯಾಶೀಲವಾಗಿ ಪರಿಷತ್ ಅನ್ನು ಮುನ್ನೆಡೆಸುತ್ತಿದ್ದು,ಮೊದಲ ಬಾರಿಗೆ ತಾನೇ ಠೇವಣಿ ಇಟ್ಟು ದತ್ತಿ ಪ್ರಶಸ್ತಿ ಕೊಡುತ್ತಿರುವುದು, ಮಾಧ್ಯಮದವರನ್ನು ಪರಿಗಣಿಸಿ ರುವುದು ಒಳ್ಳೆಯ ಬೆಳವಣಿಗೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಲಿಂಗಪ್ಪ ಅವರು ಮಾತನಾಡಿ ಎಲ್ಲ ಕನ್ನಡ ಮನಸ್ಸುಗಳ ಸಹಕಾರದಿಂದ ಕಳೆದೊಂದು ವರ್ಷದಿಂದ ಸೃಜನಾತ್ಮಕ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ. ವಾರ್ಷಿಕೋತ್ಸವದ ಪ್ರಯುಕ್ತ ದತ್ತಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಸ್ಥಾಪಿಸಿದ್ದು, 5 ಜನರ ತಜ್ಞರ ಸಮಿತಿ ಪಾರದರ್ಶಕವಾಗಿ ಆಯ್ಕೆ ಮಾಡಿದೆ. ದತ್ತಿ ದಾನಿ ಗಳಾದ ದೇವಪ್ರಕಾಶ್, ಶಾಲಿನಿ ಅವರು ನಾಲ್ಕು ದತ್ತಿಗಳನ್ನು ಪರಿಷತ್‌ನಲ್ಲಿ ಸ್ಥಾಪಿಸಿರುವುದು ಸಾಹಿತಿಗಳು, ಸಾಧಕರ ಪ್ರೋತ್ಸಾಹಕ್ಕೆ ಸಹಕಾರಿಎನಿಸಿದೆ ಎಂದರು.
ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಅವರು ಪರಿಷತ್ ಅನ್ನು ಲವಲವಿಕೆಯಿಂದ À ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು ಕೊಂಡೊಯ್ಯುತ್ತಿದ್ದು, ಸಾಹಿತ್ಯ ಬರಹ, ಚಟುವಟಿಕೆಗಳು ನಮ್ಮನ್ನು ವಿಶಾಲವಾಗಿಸುತ್ತವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯದರ್ಶಿ ಡಾ.ಡಿ.ಎನ್.ಯೋಗಿಶ್ವರಪ್ಪ ಅವರು ಕಸಾಪ ವಾರ್ಷಿಕ ಚಟುವಟಿಕೆಗಳ ವರದಿ ಮಂಡಿಸಿ ಡಿಸೆಂಬರ್ ಅಂತ್ಯದೊಳಗೆ ಜಿಲ್ಲಾ ಸಮ್ಮೇಳನ, ಐದಾರು ತಾಲ್ಲೂಕು ಸಮ್ಮೇಳನವನ್ನು ಜಿಲ್ಲಾ, ತಾಲ್ಲೂಕು ಪರಿಷತ್ ಘಟಕಗಳು ಸಂಘಟಿಸುತ್ತಿವೆ ಎಂದರು. ಸಂಘಟನಾ ಕಾರ್ಯದರ್ಶಿ ಎಸ್.ಯೋಗಾನಂದ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಸಣ್ಣ ಹೊನ್ನಯ್ಯ ಕಂಟಲಗೆರೆ ಕಾರ್ಯಕ್ರಮ ನಿರೂಪಿಸಿದರು. ಕೋಶಾಧ್ಯಕ್ಷ ಎಂ.ಎಚ್.ನಾಗರಾಜು, ಜಿ.ಎಚ್.ಮಹದೇವಪ್ಪ, ತಾಲ್ಲೂಕು ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ನಗರಾಧ್ಯಕ್ಷೆ ಕಮಲಾ ಬಡ್ಡಿಹಳ್ಳಿ, ರಾಣಿ ಚಂದ್ರಶೇಖರ್ ಸೇರಿ ಪರಿಷತ್ ಪದಾಧಿಕಾರಿಗಳು, ಲೇಖಕಿಯರ ಸಂಘ, ಶರಣ ಸಾಹಿತ್ಯ ಪರಿಷತ್, ವರದಕ್ಷಿಣೆ ವಿರೋಧಿ ವೇದಿಕೆ ಪ್ರಮುಖರು ಸೇರಿ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಮಾಧ್ಯಮ ಕ್ಷೇತ್ರದ ಪ್ರಮುಖರು, ಪರಿಷತ್ ಸದಸ್ಯರುಗಳು ಪಾಲ್ಗೊಂಡರು.
ಪ್ರಶಸ್ತಿ ಪ್ರದಾನ: ಈ ವೇಳೆೆ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ಆರ್.ದೇವಪ್ರಕಾಶ್, ಪಾವಗಡದ ಸಂಶೋಧಕ ಡಾ.ಚೆಲುವರಾಜನ್, ಲೇಖಕಿ ಸುಶೀಲಾ ಸದಾಶಿವಯ್ಯ, ಸಾಹಿತಿ ಡಾ.ಸತ್ಯಮಂಗಲ ಮಹದೇವ್ ಹಾಗೂ ದೃಷ್ಟಿ ಚೇತನ ಸಾಹಿತಿ ಮುದಿಗೆರೆ ರಮೇಶ್ ಅವರಿಗೆ ಪ್ರದಾನ ಮಾಡಿದರೆ ಎಸ್.ಆರ್.ದೇವಪ್ರಕಾಶ್ ದತ್ತಿ ಮಾಧ್ಯಮ ಪ್ರಶಸ್ತಿಯನ್ನು ಹಿರಿಯ ವರದಿಗಾರರಾದ ಕೆ.ಜೆ.ಮರಿಯಪ್ಪ, ಎಸ್.ಹರೀಶ್ ಆಚಾರ್ಯ ಅವರಿಗಗೆ ಹಾಗೂ ಶಾಲಿನಿ ಎಸ್.ಆರ್.ದೇವಪ್ರಕಾಶ್ (ಭಾಗೀರಥಮ್ಮ ನೆನಪಿನ)ದತ್ತಿ ಪ್ರಶಸ್ತಿಯನ್ನು ಶಿಶು ಸಾಹಿತಿ ಡಾ.ಕೆ.ಬಿ.ರಂಗಸ್ವಾಮಿ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ಪೈಕಿ ಡಾ.ಚೆಲುವರಾಜನ್, ಸತ್ಯಮಂಗಲ ಮಹದೇವ್ ಹಾಗೂ ಹರೀಶ್ ಆಚಾರ್ಯ ಮಾತನಾಡಿ, ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ ಎಂದರು.