Thursday, 14th November 2024

ಒಳ್ಳೆಯ ಪರಿಸರದಿಂದ ಉತ್ತಮ ಆರೋಗ್ಯ ಸಾಧ್ಯ: ಬಿ.ಸಿ.ಪಾಟೀಲ್

ತುಮಕೂರು: ಮಳೆ ನೀರು ಪೋಲಾಗದಂತೆ ಸಂಗ್ರಹಿಸಿ ಇಂಗಿಸುವಂತಹ ಕಾರ್ಯವಾಗಬೇಕು. ಅದನ್ನು ಮುಖ್ಯವಾಗಿ ರೈತ ಬಾಂಧವರು ಮಾಡಬೇಕು. ಈ ಗುರಿಯನ್ನಿಟ್ಟುಕೊಂಡು ಜಲಾನಯನ ಅಭಿವೃದ್ಧಿ ಇಲಾಖೆ ಮುಖಾಂತರ ತುಮಕೂರು ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಸಾತೇನಹಳ್ಳಿಯಲ್ಲಿ ಕೃಷಿ ಇಲಾಖೆ ಜಲಾನಯನ ಯೋಜನೆಯಡಿ ವಿಶ್ವ ಪರಿಸರ ದಿನಾ ಚರಣೆ ಅಂಗವಾಗಿ ಕೋಟಿ ವೃಕ್ಷಾರೋಪಣ ಕಾರ್ಯಕ್ರಮ ಉದ್ಘಾಟಿಸಿ ಸಚಿವ ಪಾಟೀಲ್ ಮಾತನಾಡು ತ್ತಿದ್ದರು.
ವಿಶೇಷವಾಗಿ ಪಾವಗಡ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ಕೇಂದ್ರ ಸರಕಾರದ ಯೋಜನೆಯಡಿ ಚೆಕ್ ಡ್ಯಾಂಗಳನ್ನು ನಿರ್ಮಿಸುವ ಯೋಜನೆಯನ್ನು ಜಲಾನಯನ ಅಭಿವೃದ್ಧಿ ಇಲಾಖೆ ಕೈಗೆತ್ತಿ ಕೊಳ್ಳಲಿದೆ ಎಂದು ತಿಳಿಸಿದರು.
ಕೃಷಿಕ ಖುಷಿಯಾಗಿರಬೇಕು ಎಂಬ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ.ಕೃಷಿ ಪದವಿಯಲ್ಲಿ ಕೃಷಿಕರ ಮಕ್ಕಳಿಗೆ ಶೇ 50 ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ.ಮುಖ್ಯಮಂತ್ರಿ ವಿದ್ಯಾನಿಧಿ ಮೂಲಕ ರೈತರ ಮಕ್ಕಳಿಗೆ ವೃತ್ತಿಪರ,ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.ಜತೆಗೆ ಕೃಷಿಕ ಕುಟುಂಬದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡಲಾಗುತ್ತಿದೆ ಎಂದು ಕೃಷಿ ಸಚಿವರು ಹೇಳಿದರು.
ಪ್ರಧಾನ ಮಂತ್ರಿಯವರು ಜಾರಿಗೆ ತಂದಿರುವ ಉಜ್ವಲ ಯೋಜನೆಯಿಂದಾಗಿ ಒಲೆಗಳಿಗೆ ಕಟ್ಟಿಗೆ ಕಡಿಯುವವರ ಸಂಖ್ಯೆ ಕಡಿಮೆ ಯಾಗಿದೆ ಎಂದ ಅವರು, ದುರಾಸೆಯಿಂದ ಕಾಡನ್ನು ಕಡಿದು ನಾಡನ್ನಾಗಿ ಮಾಡಿದ್ದೇವೆ.ಕಾಯಿಲೆ ಬಂದರೆ ವೈದ್ಯರು ಎಷ್ಟು ಮುಖ್ಯವೋ, ರೋಗ ಬಾರದಂತಿರಲು ಒಳ್ಳೆಯ ಗಾಳಿ,ನೀರು ಬೇಕು.ಪರಿಸರ ಚೆನ್ನಾಗಿದ್ದರೆ ಮಾತ್ರ ಉತ್ತಮ ಆರೋಗ್ಯ ಎಂಬು ದನ್ನು ಮರೆಯಬಾರದು ಎಂದು ಕರೆ ನೀಡಿದರು.
ರಾಜ್ಯದ ಎಲ್ಲಾ ಜಲಾನಯನ ಪ್ರದೇಶಗಳಲ್ಲಿ ಗಿಡ ಮರಗಳನ್ನು ಬೆಳೆದರೆ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂ ಸಚಿವರು, ವಿಶ್ವ ಪರಿಸರ ದಿನ ಅಂಗವಾಗಿ ರಾಜ್ಯ ದಾದ್ಯಂತ 1 ಕೋಟಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾತೇನಹಳ್ಳಿ ಸುತ್ತಮುತ್ತಲಿನ ಜಲಾನಯನ ಪ್ರದೇಶಗಳಲ್ಲಿಯೇ 2.30 ಲಕ್ಷ ಗಿಡಗಳನ್ನು ನೆಡಲು ಚಾಲನೆ ನೀಡಿದ್ದೇವೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನ್ನಾಡುತ್ತಾ ರಾಜ್ಯದಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆಯಿಲ್ಲ ಎಂದು ಕೃಷಿ ಸಚಿವ ಬಿ.ಸಿ‌ ಫಾಟೀಲ್ ಅವರು ತಿಳಿಸಿದರು. ಮೇ ಅಂತ್ಯಕ್ಕೆ 18931 ಮೆಟ್ರಿಕ್ ಟನ್ ರಸಗೊಬ್ಬರ ನಮಗೆ ಬೇಕಾಗಿತ್ತು. ಆದರೆ 27943 ಮೆಟ್ರಿಕ್ ಟನ್ ರಸಗೊಬ್ಬರ ನಮ್ಮಲ್ಲಿ ದಾಸ್ತಾನಿದೆ. ಈ ತಿಂಗಳು 10616 ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆಯಾಗಿದೆ ಎಂದರು.
ನಮ್ಮಲ್ಲಿ ಇದುವರೆಗೂ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಸಮಸ್ಯೆ ಎದುರಾಗಿಲ್ಲ. ಮುಂದೆಯೂ ಎದುರಾಗುವುದಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ರಸಗೊಬ್ಬರದ ಕೃತಕ ಅಭಾವ ಸೃಷ್ಠಿಸುವ ಸಲುವಾಗಿ ಕೆಲವರು ರಸಗೊಬ್ಬರ ಅಭಾವ ಸೃಷ್ಠಿಯಾಗಿದೆ ಎಂದು ಸುದ್ದಿ ಹಬ್ಬಿಸಿ ದರ ಹೆಚ್ಚಳ ಮಾಡುವ ಉದ್ದೇಶ ಹೊಂದಿದ್ದರು. ಈ ವಿಚಾರ ನಮ್ಮ ಗಮನಕ್ಕೆ ಬಂದ ಕೂಡಲೇ ಇಲಾಖೆಯ ಜಾಗೃತ ದಳ ಕಾರ್ಯಾ ಚರಣೆಗೊಂಡು ರಾಜ್ಯದಲ್ಲಿ ಎಲ್ಲೂ ಸಹ ರಸಗೊಬ್ಬರ ಕೃತಕ ಅಭಾವ ಸೃಷ್ಠಿಯಾಗದಂತೆ ನೋಡಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ರಸಗೊಬ್ಬರ ಕೃತಕ ಅಭಾವ ಹಾಗೂ ದರ ಹೆಚ್ಚಳವಾಗದಂತೆ ಹದ್ದಿನಕಣ್ಣಿಟ್ಟು ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಕಳಪೆ ಬಿತ್ತನೆ ಬೀಜ ವಿತರಣೆ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕೇಸು ಹಾಕಲಾಗುವುದು. ಈಗಾಗಲೇ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿದವರ ವಿರುದ್ಧ 700ಕ್ಕೂ ಅಧಿಕ ಕೇಸು ದಾಖಲಿಸಲಾಗಿದೆ. ಹಾಗೆಯೇ 248 ಲೈಸೆನ್ಸ್ ರದ್ದು ಮಾಡಲಾಗಿದೆ ಎಂದರು.
ಎಲ್ಲಾದರೂ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಯಾರಾದರೂ ದೂರು ನೀಡಿದರೂ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.
ಕೃಷಿ ಇಲಾಖೆಯಲ್ಲಿ ಫೀಲ್ಡ್‌ನಲ್ಲಿ ಕೆಲಸ ಮಾಡಲು ನೌಕರರ ಸಮಸ್ಯೆ ಇದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಈಗಾಗಲೇ ಇಲಾಖೆಗೆ 300 ಜನರನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ದೊರೆತಿದೆ. ಸದ್ಯದಲ್ಲೇ ಅಗತ್ಯ ಇರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಗಿ ಖರೀದಿ ಕೇಂದ್ರಗಳಲ್ಲಿ ನೋಂದಣಿಯಾಗಿರುವ ರೈತರ ರಾಗಿಯನ್ನು ಖರೀದಿಸಬೇಕು. ವಿನಾ ಕಾರಣ ರೈತರನ್ನು ಅಲೆದಾಡಿಸ ಬಾರದು. ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದ ಅವರು, ಸೂಕ್ತ ರಾಗಿ ಖರೀದಿ ಸಂಬಂಧ ಜಿಲ್ಲಾಧಿ ಕಾರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.
ಸಂಸದ ಜಿ.ಎಸ್ ಬಸವರಾಜು ಮಾತನಾಡಿ ಇಂದಿನ ಪೀಳಿಗೆಯವರು ಪರಿಸರವನ್ನು ಬೆಳೆಸಿ ಉಳಿಸಿ ಸಂರಕ್ಷಿಸಿ ಕಾಪಾಡಿಕೊಳ್ಳುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗಿಡಗಳನ್ನು ನೇಡುವುದು ಸುಲಭ ಅವುಗಳನ್ನು ಪೋಷಿಸಿ ಕಾಪಾಡಿಕೊಳ್ಳುವುದು ಮುಖ್ಯ.ಮಕ್ಕಳಿಗೆ ಚಿಕ್ಕಂದಿನಿಂದಲೇ ಮರಗಿಡ ಗಳನ್ನು ಬೆಳೆಸುವ ಪ್ರವೃತ್ತಿ ಬೆಳೆಸಬೇಕು ಎಂದರು. ಆಲದಮರ, ಅರಳಿಮರಗಳು ಅತಿ ಹೆಚ್ಚು ಆಮ್ಲಜನಕ ನೀಡುವಂತಹ ಮರಗಳಾಗಿವೆ.ಯಾವುದೇ ರೀತಿಯ ಮರಗಳ ಮಾರಣಹೋಮ ನಡೆಯದಂತೆ ಸರ್ಕಾರ ನಿಗಾವಹಿಸಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆ ಆಯುಕ್ತ ಶರತ್,ಜಲಾನಯನ ಅಭಿವೃದ್ಧಿ ಆಯುಕ್ತ, ಕೃಷಿ ಜಂಟಿ ನಿರ್ದೇಶಕಿ ರಾಜ ಸುಲೋಚನ ಮೊದಲಾದವರು ಉಪಸ್ಥಿತರಿದ್ದರು. ಸಹಸ್ರಾರು ಕೃಷಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.