Sunday, 13th October 2024

ಪಿಎಸ್​ಐ ಹುದ್ದೆ ನೇಮಕಾತಿ ಹಗರಣ: ಎಡಿಜಿಪಿ ಅಮೃತ್​ ಪೌಲ್​ ಬಂಧನ

ಬೆಂಗಳೂರು: ಪಿಎಸ್​ಐ ಹುದ್ದೆ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್​ ಪೌಲ್​ ಅವರನ್ನ ಸಿಐಡಿ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಎಡಿಜಿಪಿ ಅವರ ಬಂಧನ ಭಾರೀ ಸಂಚಲನ ಮೂಡಿಸಿದೆ.

ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರನ್ನು ಪ್ರಕರಣದಲ್ಲಿ ಬಂಧಿಸುವ ಮೂಲಕ ಸಿಐಡಿ ಅಧಿಕಾರಿಗಳು ಪ್ರಭಾವಿ ವ್ಯಕ್ತಿಯನ್ನ ಬಲೆಗೆ ಕೆಡವಿದ್ದಾರೆ. ಪೌಲ್​ರ ಬಂಧನದಿಂದ ಹಲವು ರಾಜಕಾರಣಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಅಕ್ರಮ ಬೆಳಕಿಗೆ ಬಂದ ಸಂದರ್ಭ ನೇಮಕಾತಿ ವಿಭಾಗದಲ್ಲಿ ಎಡಿಜಿಪಿ ಆಗಿ ಅಮೃತ್​ ಪೌಲ್​ ಕಾರ್ಯ ನಿರ್ವಹಿಸುತ್ತಿದ್ದರು.  ನಂತರ ಅವರನ್ನ ವರ್ಗಾವಣೆ ಮಾಡಲಾಗಿತ್ತು. ಸುಮಾರು 25 ಪೋಸ್ಟ್​ಗಳಿಗೆ 5 ಕೋಟಿ ರೂ. ಡೀಲ್​ ಕುದುರಿಸಿದ್ದರು ಎಂಬ ಆರೋಪ ಪೌಲ್​ ಮೇಲಿದೆ. ಈ ಸಂಬಂಧ ವಿಚಾರಣೆ ಎದುರಿಸಿದ್ದ  ಪೌಲ್​ ಅವರು ಸೋಮವಾರ ಸಿಐಡಿ ಕಚೇರಿಗೆ ನಾಲ್ಕನೇ ಬಾರಿಗೆ ವಿಚಾರಣೆ ಎದುರಿಸಲು ಆಗಮಿಸಿದ್ದರು. ಈ ವೇಳೆ ಅಮೃತ್​ ಪೌಲ್​ ಅವರನ್ನ ಸಿಐಡಿ ಬಂಧಿಸಿದೆ.

ಪ್ರಕರಣ ಸಂಬಂಧ ತನಿಖಾ ವರದಿಯೊಂದಿಗೆ ಹೈಕೋರ್ಟ್​ಗೆ ಜೂ.30ರಂದು ಹಾಜರಾ ಗಿದ್ದ ಸಿಐಡಿ ಅಧಿಕಾರಿಗಳ ಮೇಲೆ ನ್ಯಾಯಮೂರ್ತಿ ಪಿ.ಸಂದೇಶ್ ಅಸಮಾಧಾನ ಹೊರ ಹಾಕಿದ್ದರು. ಪ್ರಕರಣದ ಸಂಪೂರ್ಣ ವರದಿಯನ್ನು ಕೋರ್ಟ್​ಗೆ ಕೊಡಬೇಕು ಎಂದು ಹೈಕೋರ್ಟ್​ ಎಚ್ಚರಿಸಿತ್ತು.

ಹೈಕೋರ್ಟ್​ಗೆ ಜು.7ರಂದು ಸಿಐಡಿ ಅಧಿಕಾರಿಗಳು ವರದಿ ಸಲ್ಲಿಸಬೇಕು.