Friday, 13th December 2024

ನೈಸ್ ರೋಡ್ ಜಂಕ್ಷನ್ ಬಳಿ ಅಪಘಾತ: ಅಮೆಜಾನ್ ಕಂಪನಿ ಮ್ಯಾನೇಜರ್ ಸಾವು

ಬೆಂಗಳೂರು: ನಗರದ ಮಾಗಡಿ ರಸ್ತೆಯ ನೈಸ್ ರೋಡ್ ಜಂಕ್ಷನ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಈ ವೇಳೆ ಪ್ರತಿಷ್ಠಿತ ಅಮೆಜಾನ್ ಕಂಪನಿಯಲ್ಲಿ ಮ್ಯಾನೇಜರ್ ಸಾವನ್ನಪ್ಪಿದ ಘಟನೆ ನಡೆದಿದೆ.

ಸಂತೋಷ್‌ ಅಪಘಾತದಲ್ಲಿ ಸಾವನ್ನಪ್ಪಿದ್ದವರು. ಸಂತೋಷ್‌ ಅವರು ಕೆಲಸ ಮುಗಿಸಿ ಕಾರಿನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ನೈಸ್‌ ರಸ್ತೆ ಜಂಕ್ಷನ್‌ ಬಳಿ ನಿಂತಿದ್ದ ಲಾರಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು‌ ಸಂಪೂರ್ಣ ಜಖಂ ಆಗಿದ್ದು, ಸಂತೋಷ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಕಾರು ವಿಪರೀತ ವೇಗದಲ್ಲಿತ್ತು ಎಂದು ಹೇಳಲಾಗುತ್ತಿದೆ. ಸಂತೋಷ್‌ ಅವರ ಕುಟುಂಬಸ್ಥರು, ಸ್ನೇಹಿತರು ಸ್ಥಳಕ್ಕೆ ಆಗಮಿಸಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸದ್ಯ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.