Wednesday, 24th July 2024

ನಾಳೆ ಸಚಿವ ಸಂಪುಟ ಬಹುತೇಕ ಖಚಿತ: ಸಚಿವರಾಗಿ 20 ಶಾಸಕರಿಂದ ಪ್ರಮಾಣವಚನ

ಬೆಂಗಳೂರು: ಬಹು ನಿರೀಕ್ಷಿತ ಸಚಿವ ಸಂಪುಟ ರಚನೆ ನಾಳೆ ನಡೆಯುವುದು ಬಹುತೇಕ ಖಚಿತವಾಗಿದ್ದು, ಮೊದಲ ಹಂತದಲ್ಲಿ 20ಕ್ಕೂ ಹೆಚ್ಚು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಬುಧವಾರ ಬೆಳಗ್ಗೆ ಇಲ್ಲವೇ ಸಂಜೆ 4 ಗಂಟೆಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್ ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ. ಸಂಪುಟಕ್ಕೆ ಸೇರ್ಪಡೆಯಾಗುವವರ ಹೆಸರಿನಲ್ಲಿ ಒಂದು ವೇಳೆ ಸಣ್ಣಪುಟ್ಟ ವ್ಯತ್ಯಾಸಗಳಾದರೆ ಗುರುವಾರ ಶೇ.ನೂರರಷ್ಟು ಸಂಪುಟ ರಚನೆಯಾಗಲಿದೆ.

ಸಮಾರಂಭಕ್ಕೆ ರಾಜಭವನದಲ್ಲಿ ಅಗತ್ಯ ಸಿದ್ದತೆಗಳನ್ನು ನಡೆಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಶಾಸಕರನ್ನು ಹೊರತುಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗ ರನ್ನು ಕರೆತರದಂತೆ ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಶಾಸಕರಿಗೆ ಖುದ್ದು ಬೊಮ್ಮಾಯಿ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ನಾಳೆ ರಾಜಭವನಕ್ಕೆ ಆಗಮಿಸುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ದೆಹಲಿಯಲ್ಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಸಂಪುಟ ರಚನೆಗೆ ಹಶಿರು ನಿಶಾನೆ ಪಡೆದಿದ್ದಾರೆ.

20 ಮಂದಿಯಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಗೆ ನಿಷ್ಠೆಯಾಗಿರುವ 9 ಮಂದಿ, ಮಾಜಿ ಸಿಎಂ ಯಡಿಯೂರಪ್ಪ ಬಣದ 5 ಹಾಗೂ ದೆಹಲಿ ಮತ್ತು ಬೊಮ್ಮಾಯಿ ಬಣದಿಂದ 6 ಮಂದಿ ಸೇರಿದಂತೆ ಒಟ್ಟು ಮೊದಲ ಹಂತದಲ್ಲಿ 20 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!