ಇ-ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಆಟೋ ಒಕ್ಕೂಟಗಳು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಸೋಮವಾರ ಬೆಂಗಳೂರು ರಸ್ತೆಗಳಲ್ಲಿ ಆಟೋರಿಕ್ಷಾಗಳು ಸಂಚರಿಸುವುದಿಲ್ಲ. ವೈಯಕ್ತಿಕ ದ್ವಿಚಕ್ರ ವಾಹನಗಳನ್ನು (ವೈಟ್ ಬೋರ್ಡ್ ಬೈಕ್‌ಗಳು) ಬೈಕ್ ಟ್ಯಾಕ್ಸಿಗಳಾಗಿ ಬಳಸುವುದನ್ನು ನಿಷೇಧಿಸಬೇಕೆಂದು ಅಟೋ ಚಾಲಕರ ಒಕ್ಕೂಟಗಳು ಒತ್ತಾಯಿಸಿವೆ.
ರಾಜ್ಯ ಸಾರಿಗೆ ಇಲಾಖೆಯು ತನ್ನ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯಡಿಯಲ್ಲಿ ಮೊದಲ ಮತ್ತು ಕೊನೆಯ ಸಂಪರ್ಕವನ್ನು ಸುಧಾರಿಸಲು ನಗರದಲ್ಲಿ 100 ಇ-ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸಲು ಖಾಸಗಿ ಕಂಪನಿ ಬೌನ್ಸ್‌ಗೆ ಅನುಮತಿ ನೀಡಿತು. 5 ಕಿ.ಮೀ.ಗೆ 25 ರೂಪಾಯಿ, 10 ಕಿ.ಮೀ.ಗೆ 50 ರೂಪಾಯಿ ದರವನ್ನು ಸಾರಿಗೆ ಇಲಾಖೆ ನಿಗದಿಪಡಿಸಿದೆ.
ಇತ್ತೀಚೆಗಷ್ಟೇ ಆಟೋ ಚಾಲಕರೊಬ್ಬರು ಬೈಕ್ ಟ್ಯಾಕ್ಸಿ ಸವಾರನನ್ನು ಅಡ್ಡಗಟ್ಟಿ, ಹೆಲ್ಮೆಟ್ ಒಡೆದು, ಮತ್ತೆ ಬೈಕ್ ಟ್ಯಾಕ್ಸಿ ನಡೆಸುವುದು ಕಂಡು ಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಬಳಿಕ ಆಟೋ ಚಾಲಕರನ್ನು ಪೊಲೀಸರು ಬಂಧಿಸಿದ್ದರು.
ಆಟೊ ಚಾಲಕರ ಸಮಸ್ಯೆ ಅರಿತು ಮಹಾರಾಷ್ಟ್ರ ಮತ್ತು ದೆಹಲಿ ಬೈಕ್ ಟ್ಯಾಕ್ಸಿ ನಿಷೇಧಿಸಿವೆ ಎಂದು ತಿಳಿಸಿದರು. ಆಟೋ ಮುಷ್ಕರವು ಭಾನುವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗಿ ಸೋಮವಾರ ಮಧ್ಯರಾತ್ರಿ ಕೊನೆಗೊಳ್ಳುತ್ತದೆ.
ಓಲಾ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್ ಕೂಡ ಬಂದ್‌ಗೆ ಬೆಂಬಲ ನೀಡಿದ್ದು, ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಲು ಆಟೋ ಚಾಲಕರಿಗೆ ಒತ್ತಾಯಿಸಿದೆ.