Friday, 13th December 2024

ಇಂದಿನಿಂದ ಮೂರು ದಿನ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ

ಬೆಂಗಳೂರು: ಬಸವನಗುಡಿಯ ಕಡಲೆಕಾಯಿ ಪರಿಷೆಯು ಮೂರು ದಿನಗಳ ಕಾಲ ನಡೆಯಲಿದ್ದು, ಅಧಿಕೃತವಾಗಿ ಸೋಮವಾರ ಚಾಲನೆ ಸಿಗಲಿದೆ.

ಭಾನುವಾರ ರಜೆ ಹಿನ್ನೆಲೆ ದೊಡ್ಡ ಗಣೇಶ ಮತ್ತು ದೊಡ್ಡ ಬಸವಣ್ಣ ದೇವಸ್ಥಾನದ ಸುತ್ತಮುತ್ತಲಿನ ಜನ ಸಾಗರವೇ ನೆರೆದಿತ್ತು.

ಸಚಿವರು ದೊಡ್ಡ ಗಣೇಶನ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಕಡಲೆಕಾಯಿ ಪರಿಷೆಯ ಸಿದ್ಧತೆಗಳನ್ನು ಪರಿಶೀಲಿಸಿದರು.

ಹೋಂಗಾರ್ಡ್ ಸೇರಿದಂತೆ 600ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದೇವೆ. ಕಡಲೆಕಾಯಿ ಪರಿಷೆಗೆ 7-8 ಲಕ್ಷ ಜನರು ಬರುವ ಸಾಧ್ಯತೆಯಿದೆ. ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಕಡಲೆಕಾಯಿ ಪರಿಷೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಬರುವ ಜನರಿಗೆ ಪ್ರಸಾದದ ವ್ಯವಸ್ಥೆ ಇರಲಿದೆ ಎಂದರು.

ಈ ವರ್ಷ ಪ್ಲಾಸ್ಟಿಕ್‍ ಮುಕ್ತ ಕಡಲೆಕಾಯಿ ಪರಿಷೆಗೆ ನಾನಾ ಜಿಲ್ಲೆಗಳಿಂದ 200 ರೈತರು ಹಾಗೂ ತಮಿಳುನಾಡು, ಆಂಧ್ರ ಸೇರಿದಂತೆ ನಾನಾ ರಾಜ್ಯಗಳಿಂದ ವ್ಯಾಪಾರಸ್ಥರು ಬರಲಿದ್ದು, ಹತ್ತಾರು ಬಗೆಯ ಕಡಲೆಕಾಯಿಗಳ ಮಾರಾಟಕ್ಕೆಂದೇ ಒಂದು ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಜತೆಗೆ, ಇತರೆ ಪರಿಕರಗಳ ಮಾರಾಟಕ್ಕೆ ಸಹಸ್ರಾರು ಮಳಿಗೆಗಳನ್ನು ತೆರೆಯಲಾಗಿದೆ. ಯಾವುದೇ ಅವಘಡಗಳು ಸಂಭವಿಸದಂತೆ ಮಾರ್ಷಲ್ಸ್ ಹಾಗೂ ಪೊಲೀಸರ ನಿಯೋಜನೆ ಮಾಡಲಾಗಿದೆ.

ಚಾಮರಾಜಪೇಟೆ ಹಾಗೂ ಗಾಂಧಿ ಬಜಾರ್ ಮುಖ್ಯರಸ್ತೆಯಿಂದ ಹನುಮಂತನಗರ ಕಡೆ ಹೋಗುವ ವಾಹನಗಳು, ರಾಮಕೃಷ್ಣ ಆಶ್ರಮದ ಬಲ ತಿರುವಿನಲ್ಲಿ ಸಾಗಿ ಹಯವದನರಾವ್ ರಸ್ತೆ, ಗವಿಪುರ ರಸ್ತೆ ಹಾಗೂ ಮೌಂಟ್ ಜಾಯ್ ರಸ್ತೆ ಮೂಲಕ ಹೋಗಬಹುದು.

ಆರ್ ವಿ ಕಾಲೇಜು ಜಂಕ್ಷನ್ ಕಡೆಯಿಂದ ಬರುವ ವಾಹನಗಳು, ಠ್ಯಾಗೋರ್ ವೃತ್ತದ ಬಳಿ ಬಲತಿರುವು ಪಡೆದು ಗಾಂಧಿ ಬಜಾರ್ ಮುಖ್ಯರಸ್ತೆ, ರಾಮಕೃಷ್ಣ ಆಶ್ರಮ ಜಂಕ್ಷನ್, ಹಯವದನ ರಾವ್ ರಸ್ತೆ, ಗವಿಪುರ ರಸ್ತೆ ಹಾಗೂ ಮೌಂಟ್ ಜಾಯ್ ರಸ್ತೆ ಮೂಲಕ ಹನುಮಂತ ನಗರಕ್ಕೆ ತೆರಳಬಹುದು.

ತ್ಯಾಗರಾಜನಗರ, ಬನಶಂಕರಿ, ಎನ್. ಆರ್ ಕಾಲೋನಿ ಮುಖಾಂತರ ಚಾಮರಾಜಪೇಟೆಗೆ ಹೋಗುವ ವಾಹನಗಳು, ಕಾಮತ್ ಯಾತ್ರಿ ನಿವಾಸ ರಸ್ತೆಯಲ್ಲಿ ಎಡ ತಿರುವು ಪಡೆದು, ಬಿಎಂಎಸ್ ಕಾಲೇಜು ವಸತಿ ನಿಲಯ ರಸ್ತೆ, ಕತ್ರಿಗುಪ್ಪೆ ರಸ್ತೆ ಜಂಕ್ಷನ್, ನಾರಾಯಣಸ್ವಾಮಿ ವೃತ್ತ, ಕೆ. ಜಿ ನಗರ ಮುಖ್ಯರಸ್ತೆ ಮೂಲಕ ಸಾಗಬಹುದು. ಎನ್. ಆರ್ ಕಾಲೋನಿಯ ಎಪಿಎಸ್ ಕಾಲೇಜು ಆಟದ ಮೈದಾನ, ಕೊಹಿನೂರು ಆಟದ ಮೈದಾನ, ಉದಯಭಾನು ಕಲಾ ಸಂಘದ ಆಟದ ಮೈದಾನಗಳಲ್ಲಿ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.