Saturday, 14th December 2024

ಬಿಎಂಆರ್ಸಿಎಲ್ ಮೆಟ್ರೊ ನಿಲ್ದಾಣಗಳಲ್ಲಿ ಬ್ಯಾಟರಿ ವಿನಿಮಯ ಸೇವೆ ಘೋಷಿಸಿದ ಎಚ್ಇಐಡಿ, ಬಿಎಂಆರ್ಸಿಎಲ್

ಬೆಂಗಳೂರು: ಹೋಂಡಾ ಮೋಟರ್ ಕಂಪನಿ ಲಿಮಿಟೆಡ್ನ ಬ್ಯಾಟರಿ ವಿನಿಮಯ ಸೇವೆಯ ಅಂಗಸಂಸ್ಥೆಯಾಗಿರುವ ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್ಇಐಡಿ) ಮತ್ತು ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಜಂಟಿ ಸಂಸ್ಥೆಯಾಗಿರುವ ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್), ಬಿಎಂಆರ್ಸಿ ಎಲ್ನ ಮೆಟ್ರೊ ನಿಲ್ದಾಣಗಳಲ್ಲಿ ‘ಎಚ್ಇಐಡಿ’ನಿಂದ ನಿರ್ವಹಿಸಲ್ಪಡುವ ಹೋಂಡಾ ಇ: ಬ್ಯಾಟರಿ ವಿನಿಮಯ ಸೇವೆಗೆ ಇಂದು ಇಲ್ಲಿ (ಡಿಸೆಂಬರ್ 7) ಚಾಲನೆ ನೀಡಲಾಯಿತು.

ಭಾರತದಲ್ಲಿ ವಿದ್ಯುತ್ಚಾಲಿತ ಆಟೊರಿಕ್ಷಾಗಳಿಗೆ ಬ್ಯಾಟರಿ ವಿನಿಮಯ ಸೇವೆ ಒದಗಿಸಲು 2021ರ ನವೆಂಬರ್ನಲ್ಲಿ ‘ಎಚ್ಇಐಡಿ’ ಸ್ಥಾಪಿಸಲಾಯಿತು. ದೇಶದ ಆಯ್ದ ನಗರಗಳಲ್ಲಿ ಆಟೊರಿಕ್ಷಾ ಚಾಲಕರು ಹತ್ತಿರದ ಬ್ಯಾಟರಿ ವಿನಿಮಯ ಕೇಂದ್ರಗಳಲ್ಲಿ ತಮ್ಮ ಬಳಿಯ ಡಿಸ್ಚಾರ್ಜ್ ಆದ ಬ್ಯಾಟರಿಗಳನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಲಾದ ಬ್ಯಾಟರಿಗಳೊಂದಿಗೆ (ಹೋಂಡಾ ಮೊಬೈಲ್ ಪವರ್ ಪ್ಯಾಕ್ ಇ:) ವಿನಿಮಯ ಮಾಡಿಕೊಳ್ಳಲು ‘ಎಚ್ಇಐಡಿ’ಯ ಬ್ಯಾಟರಿ ವಿನಿಮಯ ಸೇವೆಯು ಅವಕಾಶ ಒದಗಿಸಲಿದೆ. ಈ ಸೇವೆಯನ್ನು ಬಳಸಿಕೊಳ್ಳುವುದರಿಂದ ವಿದ್ಯುತ್ಚಾಲಿತ ವಾಹನ (ಇವಿ) ಖರೀದಿಸಲು ಚಾಲಕರು ಮಾಡುವ ಆರಂಭಿಕ ವೆಚ್ಚವನ್ನು ಗಣನೀಯವಾಗಿ ಕಡಿಮೆ ಆಗಲಿದೆ. ಜೊತೆಗೆ ದೂರ ಕ್ರಮಿಸುವ ಆತಂಕ ಮತ್ತು ಬ್ಯಾಟರಿಗಳು ಖಾಲಿಯಾಗುವುದರ ಬಗೆಗಿನ ಚಾಲಕರ ಚಿಂತೆಯೂ ದೂರವಾಗಲಿದೆ.

ವಿದ್ಯುತ್ಚಾಲಿತ ವಾಹನಗಳ ಬಳಕೆ ಕ್ಷೇತ್ರದಲ್ಲಿ ಪರಸ್ಪರ ಸಹಕರಿಸಲು ‘ಎಚ್ಇಐಡಿ’ ಮತ್ತು ‘ಬಿಎಂಆರ್ಸಿಎಲ್‘ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿವೆ. ದೇಶದಾದ್ಯಂತ ಬ್ಯಾಟರಿ ವಿನಿಮಯ ಕೇಂದ್ರಗಳ ಜಾಲವನ್ನು ಅಭಿವೃದ್ಧಿಪಡಿಸುವ ಮೂಲಕ ಪರಸ್ಪರ ಬದ್ಧತೆಯನ್ನು ದೃಢಪಡಿಸಿವೆ. ‘ಎಚ್ಇಐಡಿ‘ಯು ಈಗಾಗಲೇ ಬೆಂಗಳೂರಿನ 5 ‘ಬಿಎಂಆರ್ಸಿಎಲ್’ ಕೇಂದ್ರಗಳಲ್ಲಿ (ಕೆಆರ್ ಮಾರುಕಟ್ಟೆ, ನ್ಯಾಷನಲ್ ಕಾಲೇಜ್, ಬನಶಂಕರಿ, ಟ್ರಿನಿಟಿ, ಬೈಯಪ್ಪನಹಳ್ಳಿ ನಿಲ್ದಾಣ) – ಹೋಂಡಾ ಬ್ಯಾಟರಿ ವಿನಿಮಯ ಕೇಂದ್ರಗಳನ್ನು (ಹೋಂಡಾ ಇ:ಸ್ವ್ಯಾಪ್ ಸ್ಟೇಷನ್) ಸ್ಥಾಪಿಸಿದೆ. ‘ಹೋಂಡಾ ಮೊಬೈಲ್ ಪವರ್ ಪ್ಯಾಕ್ ಇ:’ ಗೆ ಹೊಂದಾಣಿಕೆ ಯಾಗುವ ವಿದ್ಯುತ್ಚಾಲಿತ ಆಟೊರಿಕ್ಷಾಗಳಿಗಾಗಿ ಈಗ ಸೇವೆಗೆ ಚಾಲನೆ ನೀಡಲಾಗಿದೆ. ಈ ಪಾಲುದಾರಿಕೆಯು ಪ್ರಯಾಣಿಕರ ಮನೆ ಬಾಗಿಲಿನಿಂದ ಮೆಟ್ರೊ ನಿಲ್ದಾಣದವರೆಗೆ ವಿದ್ಯುತ್ಚಾಲಿತ ವಾಹನಗಳ ಸೇವೆಯ ವಿಸ್ತರಣೆಗೆ ಹೆಚ್ಚು ವೇಗ ನೀಡಲಿದೆ. ಮುಂಬರುವ ದಿನಗಳಲ್ಲಿ ಹೆಚ್ಚಲಿರುವ ಪರಿಸರ ಸ್ನೇಹಿ ಮತ್ತು ಸ್ವಚ್ಛ ಇಂಧನ ಬಳಕೆಗೆ ಗಮನಾರ್ಹ ಕೊಡುಗೆಯನ್ನೂ ನೀಡಲಿದೆ.

2023ರ ಜುಲೈ ವೇಳೆಗೆ ಬೆಂಗಳೂರಿನಲ್ಲಿ 70ಕ್ಕೂ ಹೆಚ್ಚು ಇಂತಹ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಬ್ಯಾಟರಿ ವಿನಿಮಯ ಕೇಂದ್ರಗಳ ಅತಿದೊಡ್ಡ ಜಾಲ ರೂಪಿಸುವುದು ‘ಎಚ್ಇಐಡಿ‘ಯ ಉದ್ದೇಶವಾಗಿದೆ. ಬೆಂಗಳೂರು ನಗರದ ಯಶಸ್ಸಿನ ಆಧಾರದ ಮೇಲೆ ಈ ಸೇವೆಯನ್ನು ದೇಶದ ಇತರ ಪ್ರಮುಖ ನಗರಗಳಿಗೆ ಹಂತ ಹಂತವಾಗಿ ವಿಸ್ತರಿಸಲಾಗುವುದು.

ಬ್ಯಾಟರಿ ವಿನಿಮಯ ಕೇಂದ್ರಗಳ ಉದ್ಘಾಟನಾ ಸಮಾರಂಭವು 2022ರ ಡಿಸೆಂಬರ್ 7ರಂದು ನಡೆಯಿತು. ಈ ಸಂದರ್ಭವು ಎರಡೂ ಕಂಪನಿಗಳ ನಡುವಣ ಪಾಲುದಾರಿಕೆಯಲ್ಲಿನ ಪ್ರಗತಿಯ ಸಂಭ್ರಮಾಚರಣೆಗೂ ಸಾಕ್ಷಿಯಾದವು. ಕಡಿಮೆ ದೂರದ ಪ್ರಯಾಣಕ್ಕೆ ವಿದ್ಯುತ್ಚಾಲಿತ ವಾಹನಗಳ ಬಳಕೆ ಉತ್ತೇಜಿಸಲು ನೆರವಾಗುವುದರ ಮೂಲಕ ಬೆಂಗಳೂರು ನಗರದಲ್ಲಿ ವಾಹನಗಳು ಹೊರಸೂಸುವ ಹೊಗೆ ಮಾಲಿನ್ಯವನ್ನು ಗಮನಾರ್ಹವಾಗಿ ತಗ್ಗಿಸಲು ಮತ್ತು ಪರಿಸರ ಸ್ನೇಹಿಯಾದ ಸುಂದರ ಭವಿಷ್ಯ ಸಾಕಾರ ಗೊಳಿಸಲು ಪರಸ್ಪರರ ದೃಢ ನಿರ್ಧಾರವನ್ನು ಎರಡೂ ಕಂಪನಿಗಳು ಪುನರುಚ್ಚರಿಸಿದವು.

ಗಣ್ಯರ ಆಶಯ ಭಾಷಣದ ಪ್ರಮುಖ ಟಿಪ್ಪಣಿಗಳು: ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾದ ಅಧ್ಯಕ್ಷ ಹಾಗೂ ಸಿಎಂಡಿ ಕಿಯೋಶಿ ಇಟೊ ಅವರು ಮಾತನಾಡಿ, ‘ಸಂಪೂರ್ಣ ಚಾರ್ಜ್ ಆಗಿರುವ ಮತ್ತು ವಿನಿಮಯವಾಗುವ ಪ್ರತಿಯೊಂದು ಬ್ಯಾಟರಿ ಮೇಲೆ ಸಮಗ್ರ ಸ್ವರೂಪದ ನಿಗಾ ಇರಿಸುವಿಕೆ, ವಿಶ್ವಾಸಾರ್ಹ ಸೇವೆಯ ಖಾತರಿಪಡಿಸುವಿಕೆ ಮತ್ತು ಹೋಂಡಾ ಮೊಬೈಲ್ ಪವರ್ ಪ್ಯಾಕ್–ಇ ಬಳಸುವ ವಿದ್ಯುತ್ಚಾಲಿತ ವಾಹನ (ಇವಿ) ಅಭಿವೃದ್ಧಿಪಡಿಸುತ್ತಿರುವ ವಾಹನ ತಯಾರಕರಿಗೆ ಬೆಂಬಲ ನೀಡುವುದು– ಈ ಮೂರು ಸಂಗತಿಗಳಿಗೆ ‘ಎಚ್ಇಐಡಿ’ಯು ತನ್ನೆಲ್ಲ ಗಮನ ಕೇಂದ್ರೀಕರಿಸಲಿದೆ. ಹೋಂಡಾ ಇ: ವಿನಿಮಯ ಕೇಂದ್ರಗಳ ಜಾಲ ನಿರ್ಮಿಸಲು ‘ಬಿಎಂಆರ್ಸಿಎಲ್’ ಜೊತೆಗಿನ ಸಹಭಾಗಿತ್ವವು ಬೆಂಗಳೂರು ಮಹಾನಗರದ ಮೆಟ್ರೊ ಬಳಕೆದಾರರಿಗೆ ಮನೆ ಬಾಗಿಲಿನಿಂದ ನಿಲ್ದಾಣದವರೆಗೆ ಶುದ್ಧ ಮತ್ತು ಪರಿಸರ ಸ್ನೇಹಿ ಇಂಧನ ಬಳಸುವ ವಿದ್ಯುತ್ಚಾಲಿತ ವಾಹನಗಳ ಬಳಕೆಯ ಸೌಕರ್ಯವನ್ನು ಹೆಚ್ಚು ದಕ್ಷ ರೀತಿಯಲ್ಲಿ ಒದಗಿಸಲಿದೆ’ ಎಂದು ಹೇಳಿದ್ದಾರೆ.

‘ಬಿಎಂಆರ್ಸಿಎಲ್’ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ಮಾತನಾಡಿ– “ಅಗತ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿದರೆ ಜನರು ಪರಿಸರ ಸ್ನೇಹಿ ವಾಹನಗಳ ಸೇವೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲು ಮುಂದಾಗುತ್ತಾರೆ.

‘ಕರ್ನಾಟಕ ವಿದ್ಯುತ್ಚಾಲಿತ ವಾಹನ ಮತ್ತು ಸಂಗ್ರಹ ನೀತಿ 2017’ಕ್ಕೆ ಅನುಗುಣವಾಗಿ ಮತ್ತು ಅಂತಹ ಸೌಲಭ್ಯಗಳನ್ನು ಉತ್ತೇಜಿಸಲು ಮತ್ತು 5 ಮೆಟ್ರೊ ನಿಲ್ದಾಣಗಳಲ್ಲಿ ಅತ್ಯಾಧುನಿಕ ಹೋಂಡಾ ಇ–ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್ಇಐಡಿ) ಜೊತೆಗೆ ‘ಬಿಎಂಆರ್ಸಿಎಲ್’ ಯು ಪಾಲುದಾರಿಕೆ ಹೊಂದಲು ನಮಗೆ ಸಂತಸವಾಗುತ್ತಿದೆ. ಈ ಮೂಲಸೌಕರ್ಯವು ಮೆಟ್ರೊ ಪ್ರಯಾಣಿಕರು ತಮ್ಮ ಮನೆ ಬಾಗಿಲಿನಿಂದ ಮೆಟ್ರೊ ನಿಲ್ದಾಣದವರೆಗೆ ಪ್ರಯಾಣಿಸಲು ವಿದ್ಯುತ್ಚಾಲಿತ ವಾಹನಗಳನ್ನು ಬಳಸಿಕೊಳ್ಳಲು ಅಗತ್ಯವಾದ ನೆರವು ಕಲ್ಪಿಸಿಕೊಡಲಿದೆ. ಇತರ ವಿದ್ಯುತ್ಚಾಲಿತ ವಾಹನಗಳ ಬಳಕೆದಾರರೂ ಪರಿಸರ ಸ್ನೇಹಿ ಬೆಂಗಳೂರಿನ ಹೆಮ್ಮೆಯ ಪಾಲುದಾರ ರಾಗುವುದಕ್ಕೂ ನೆರವು ಒದಗಿಸಲಿದೆ’ ಎಂದು ಹೇಳಿದ್ದಾರೆ.