ಬೆಂಗಳೂರು: ಮಾರತಹಳ್ಳಿಯ ವರ್ತೂರು ಮುಖ್ಯರಸ್ತೆಯಲ್ಲಿ ಬೈಕ್ಗೆ ಬಿಎಂಟಿಸಿ ವೋಲ್ವೋ ಬಸ್ ಡಿಕ್ಕಿಯಾದ ಪರಿಣಾಮ ಸವಾರ ಮೃತಪಟ್ಟಿದ್ದಾನೆ.
ಎಳಂಗೋವನ್ ಸೆಂಕತ್ತವಲ್ (43) ಮೃತ ಬೈಕ್ ಸವಾರ. ಕುಂದಲಹಳ್ಳಿ ಜಂಕ್ಷನ್ ಕಡೆಯಿಂದ ಬೆಳ್ಳಂದೂರಿಗೆ ಮೃತ ಬೈಕ್ ಸವಾರ ಎಳಂಗೋವನ್ ಸೆಂಕತ್ತವಲ್ ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ಬರುತ್ತಿದ್ದ ಬಿಎಂಟಿಸಿ ವೊಲ್ವೋ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ರಭಸಕ್ಕೆ ಬೈಕ್ ಸವಾರ ಕೆಳಗೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದ ಭೀಕರತೆಗೆ ಎಳಂಗೋವನ್ ಸೆಂಕತ್ತವಲ್ ಅವರ ತಲೆ ಹಾಗೂ ಮುಖದ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಕೂಡಲೇ ಸ್ಥಳೀಯರು ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ದ್ದಾರೆ.
ದುರಾದೃಷ್ಟವಶಾತ್ ಮಾರ್ಗ ಮಧ್ಯೆಯೇ ಎಳಂಗೋವನ್ ಸೆಂಕತ್ತವಲ್ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಹೆಚ್ಎಎಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವಾರವಷ್ಟೇ ಬಸ್ ಡಿಕ್ಕಿಯಾಗಿ ಮಹಿಳೆ ರಸ್ತೆಯಲ್ಲೇ ಸಾವನ್ನಪ್ಪಿದ್ದರು. ನಗರದ ಸುಬ್ಬಯ್ಯ ಸರ್ಕಲ್ ಬಳಿ ಈ ಅಪಘಾತ ನಡೆದಿದ್ದು, ಪುಷ್ಪ (51) ಎನ್ನುವ ಮಹಿಳೆ ಬಿಎಂಟಿಸಿ ಚಾಲಕನ ಅಜಾಗರುಕತೆಗೆ ಬಲಿಯಾಗಿದ್ದರು.