ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇಂದು ನ್ಯಾಯಾಧೀಶರ ನಿವಾಸಕ್ಕೆ ಕರೆತಂದಿದ್ದಾರೆ. ಈ ವೇಳೆ ನ್ಯಾಯಾಧೀಶರು ಜುಲೈ 18 ರವರೆಗೆ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿರುವ ನ್ಯಾಯಾಧೀಶರ ನಿವಾಸದಕ್ಕೆ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ಕರೆತಂದಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶ ಗಜಾನನ ಭಟ್, ನಾಗೇಂದ್ರ ಅವರನ್ನು ಜುಲೈ 18 ರ ವರೆಗೆ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಮಾಜಿ ಸಚಿವ ಬಿ.ನಾಗೇಂದ್ರ ಅವರ ನಿವಾಸ, ಆಪ್ತರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ನಾಗೇಂದ್ರ ಅವರ ಮನೆಯಲ್ಲಿ ಆಸ್ತಿ ಪತ್ರಗಳು ದೊರೆತಿದ್ದವು ಎನ್ನಲಾಗಿದೆ. ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಮೇ 26ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಮೇಲೆ ನಿಗಮದಲ್ಲಿ 187 ಕೋಟಿ ಹಗರಣ ಆಗಿರೋದು ಬಯಲಾದ ಬೆನ್ನಲ್ಲೇ ಸಿಬಿಐ ಮತ್ತು ಇಡಿ ಅಧಿಕಾರಿಗಳು ತನಿಖೆ ಮಾಡ್ತಿದ್ದು, ನಿನ್ನೆಯಷ್ಟೇ ಬಿ.ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.