Saturday, 14th December 2024

777 ಚಾರ್ಲಿ ವೀಕ್ಷಿಸಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಮೃದು ವ್ಯಕ್ತಿತ್ವವುಳ್ಳ ಭಾವುಕ ಜೀವಿ. ಸಿಎಂ ಒರಾಯಿನ್ ಮಾಲ್‌ನಲ್ಲಿ ‘777 ಚಾರ್ಲಿ’ ಸಿನಿಮಾ ವೀಕ್ಷಿಸಿದ್ದಾರೆ.

ಪ್ರಾಣಿ ಪ್ರೇಮಿ ಆಗಿರುವ ಸಿಎಂ ಬೊಮ್ಮಾಯಿ, ಕೆಲವು ತಿಂಗಳ ಹಿಂದಷ್ಟೆ ತಮ್ಮ ಮುದ್ದಿನ ನಾಯಿಯನ್ನು ಕಳೆದುಕೊಂಡಿದ್ದರು.

ಸೋಮವಾರ ರಾತ್ರಿ ‘777 ಚಾರ್ಲಿ’ ನೋಡಿ ಅಗಲಿದ ತಮ್ಮ ಪ್ರೀತಿಯ ನಾಯಿ ಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಸಿಎಂ ಕಣ್ಣೀರು ಹಾಕಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸಿನಿಮಾವನ್ನು ಮಧ್ಯಂತರದವರೆಗೆ ನೋಡಿ ಬಂದು ಮಾಧ್ಯಮ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ”ಈಗಿನನ್ನೂ ಅರ್ಧ ಸಿನಿಮಾ ನೋಡಿದ್ದೇವೆ. ಸಿನಿಮಾದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧದ ಬಗ್ಗೆ ಹೇಳಲಾಗಿದೆ. ಅದರಲ್ಲಿಯೂ ಶ್ವಾನ, ಮನುಷ್ಯನನ್ನು ಅತಿಯಾಗಿ ಪ್ರೀತಿಸುವ ಪ್ರಾಣಿ, ಅದರ ಬಗ್ಗೆ ಕತೆ ಮಾಡ ಲಾಗಿದೆ. ಶ್ವಾನ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಮಾರ್ಮಿಕ ವಾಗಿ, ಸೂಕ್ಷ್ಮವಾಗಿ ಹಾಗೂ ಭಾವನಾತ್ಮಕವಾಗಿ ನಿರ್ದೇಶಕ ಕಿರಣ್ ರಾಜ್ ಹೇಳಿದ್ದಾರೆ” ಎಂದಿದ್ದಾರೆ.

ಸಿಎಂ, ರಕ್ಷಿತ್ ಶೆಟ್ಟಿಯನ್ನು ಹೊಗಳುತ್ತಾ, ”ನಾಯಿಯೊಂದಿಗೆ ನಟಿಸುವಾಗ ಬಹಳ ತಾಳ್ಮೆ ಇರಬೇಕಾಗುತ್ತದೆ, ಅದರ ಮನಸ್ಥಿತಿ ಅರ್ಥ ಮಾಡಿಕೊಂಡು ನಟಿಸಬೇಕಾಗುತ್ತದೆ. ಅದನ್ನು ರಕ್ಷಿತ್ ಶೆಟ್ಟಿಯವರು ಬಹಳ ಅದ್ಭುತವಾಗಿ ನಿಭಾಯಿಸಿದ್ದಾರೆ” ಎಂದಿ ದ್ದಾರೆ.

ಈ ಸಿನಿಮಾವನ್ನು ಎಲ್ಲರೂ ನೋಡಬೇಕು. ಎಲ್ಲರೂ ಪ್ರಾಣಿ ಪ್ರೇಮಿಗಳಾಗಬೇಕು ಎಂದು ಕರೆ ಕೊಡುತ್ತೀನಿ” ಎಂದರು ಸಿಎಂ.

”ನಾಯಿಗಳ ರಕ್ಷಣೆಗೆ ಕೇಂದ್ರಗಳನ್ನು ಮಾಡುತ್ತಿರುವವರಿಗೆ ವಿಶೇಷ ನೆರವು ಹಾಗೂ ಬೀದಿ ನಾಯಿಗಳನ್ನು ಸಹ ಸರಿಯಾದ ರೀತಿ ಯಲ್ಲಿ ನೋಡಿಕೊಳ್ಳುವ ಬಗ್ಗೆಯೂ ಯೋಜನೆ ಜಾರಿಗೆ ತರುವ ಬಗ್ಗೆಯೂ ತಜ್ಞರೊಟ್ಟಿಗೆ ಮಾತನಾಡುವ ಆಲೋಚನೆ ಇದೆ” ಎಂದರು.

ಸಿಎಂ ಜೊತೆಗೆ ಸಚಿವರಾದ ಆರ್.ಅಶೋಕ್, ಸುಧಾಕರ್, ಬಿ ಸಿ ನಾಗೇಶ, ಶಾಸಕ ರಘುಪತಿ ಭಟ್, ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಕಿರಣ್ ರಾಜ್, ನಟಿ ಸಂಗೀತಾ ಶೃಂಗೇರಿ ಮತ್ತು ಇತರರು ಸಿನಿಮಾ ನೋಡಿದರು.