Saturday, 14th December 2024

ಗಡಿ ವಿವಾದ: ಕನ್ನಡ ಪರ ಸಂಘಟನೆಯ ಸದಸ್ಯರ ಬಂಧನ

ಬೆಂಗಳೂರು: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆ ಮಹಾರಾಷ್ಟ್ರದ ವಿರುದ್ಧ ಬೆಂಗಳೂರಿನ ಗಾಂಧಿನಗರ ದಲ್ಲಿರುವ ಮಹಾರಾಷ್ಟ್ರ ಬ್ಯಾಂಕ್ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಲಾಗಿದೆ. ಈ ಮಧ್ಯೆ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಯ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ನಮ್ಮ ಕರ್ನಾಟಕ ಸೇನೆಯಿಂದ ಮಹಾರಾಷ್ಟ್ರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಪೊಲಿಸರು ಪ್ರತಿಭಟನಾ ಕಾರರನ್ನು ಬಂಧಿಸಿ, ಬಸ್‌ಗಳಲ್ಲಿ ಕರೆದೊಯ್ದಿದ್ದಾರೆ.

ಕಳೆದ ಬುಧವಾರ ಮುಂಬೈನ ಪೊವೈ ಪ್ರದೇಶದಲ್ಲಿ ಕರ್ನಾಟಕ ಬ್ಯಾಂಕ್ ಮುಂದೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಕೈಯಲ್ಲಿ ಮಹಾರಾಷ್ಟರ ಪರವಾದ ಘೋಷಣೆಗಳಿರುವ ಫೋಸ್ಟರ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿ, ರಾಜ್ಯದ ಹೇಳಿಕೆಯನ್ನು ಟೀಕಿಸಿದ್ದರು.

ಇತ್ತಿಚೆಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಈ ವಿಚಯದಲ್ಲಿ ಕೇಂದ್ರ ಮಧ್ಯ ಪ್ರವೇಶಿಸ ಬೇಕು ಎಂದು ಒತ್ತಾಯಿಸಿದ್ದರು.

ಬೆಳಗಾವಿ ಮತ್ತು ಪುಣೆಯಲ್ಲಿ ಉಭಯ ರಾಜ್ಯಗಳ ವಾಹನಗಳ ಮೇಲೆ ದಾಳಿ ಮಾಡಿ ಹಾನಿ ಮಾಡಲಾಗುತ್ತಿದೆ. ಹಾನಿ ಮತ್ತು ಹಿಂಸಾಚಾರದ ವರದಿಗಳಿಂದಾಗಿ ಎರಡೂ ರಾಜ್ಯಗಳು ಬುಧವಾರ ಇತರ ರಾಜ್ಯಗಳಿಗೆ ಬಸ್ ಸೇವೆಗಳನ್ನು ಭಾಗಶಃ ಸ್ಥಗಿತ ಗೊಳಿಸಿವೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಮತ್ತು ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿರುವ ಬಿಜೆಪಿ ಗಡಿ ವಿವಾದವನ್ನು ಉಲ್ಬಣ ಗೊಳಿಸಿದ್ದಕ್ಕಾಗಿ ಪ್ರತಿಪಕ್ಷಗಳಿಂದ ಭಾರೀ ಟೀಕೆಗೆ ಗುರಿಯಾಗಿದೆ.