ರಸ್ತೆ ಅಪಘಾತದಲ್ಲಿ ಜನನಾಂಗ ಕಳೆದುಕೊಂಡಿದ್ದ 12 ವರ್ಷದ ಬಾಲಕನಿಗೆ ಯಶಸ್ವಿ ಜನನಾಂಗ ಮರುಜೋಡಣೆ ಮಾಡಿದ ಫೋರ್ಟಿಸ್ ವೈದ್ಯರು
ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ತನ್ನ ಜನನಾಂಗ ಕಳೆದುಕೊಂಡಿದ್ದ ನೈಜಿರಿಯಾ ಮೂಲದ 12 ವರ್ಷದ ಬಾಲಕನಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ “ಸಂಕೀರ್ಣ ಶಸ್ತ್ರಚಿಕಿತ್ಸೆ” ಮೂಲಕ ಜನನಾಂಗವನ್ನು ಮರುಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ ವಿಭಾಗದ ನಿರ್ದೇಶಕರಾದ ಡಾ. ಮೋಹನ್ ಕೇಶವಮೂರ್ತಿ ಅವರ ತಂಡ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಪ್ರಕರಣದ ಕುರಿತು ಮಾತನಾಡಿದ ಅವರು, ೬ ವರ್ಷಗಳ ಹಿಂದೆಯೇ ರಸ್ತೆ ಅಪಘಾತದಲ್ಲಿ ಬಾಲಕನ ಶಿಶ್ನ ಹಾಗೂ ಬಲವೃಷಣ ಸಂಪೂರ್ಣ ಕತ್ತರಿಸಿಕೊಂಡಿತ್ತು. ಅಂದಿನಿಂದ ಬಾಲಕ ಸರಿಯಾಗಿ ಮೂತ್ರ ವಿಸರ್ಜಿಸಲು ಸಾಧ್ಯವಾಗದೇ ಕ್ಯಾತಿಟರ್ ಅಳವಡಿಸಿ ಪ್ಲಾಸ್ಲಿಕ್ ಚೀಲವನ್ನು ಮೂತ್ರ ಶೇಖರಣೆಗೆ ಹಾಕಲಾಗಿತ್ತು.
ಬಾಲಕ ಶಾಲೆಗೂ ಸಹ ಈ ಮೂತ್ರದ ಪ್ಲಾಸ್ಟಿಕ್ ಚೀಲವನ್ನು ಹೊತ್ತುಕೊಂಡೇ ಹೋಗಬೇಕಿತ್ತು. ಅದೂ ಅಲ್ಲದೇ, ಅಪಘಾತದಿಂದ ಮೂತ್ರಕೋಶವು ದುರ್ಬಲವಾಗಿದ್ದರಿಂದ ಹೆಚ್ಚು ಸಮಯ ಮೂತ್ರವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಬಾಲಕ ಫೊರ್ಟಿಸ್ ಆಸ್ಪತ್ರೆಗೆ ದಾಖಲಾದ ಬಳಿಕ, ತಪಾಸಣೆಗೆ ಒಳಪಡಿಸಲಾಯಿತು. ಬಾಲಕನಿಗೆ ಮೂರು ಹಂತದಲ್ಲಿ ಶಿಶ್ನವನ್ನು ಪುನರ್ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂಬುದು ತಿಳಿದುಬಂತು.
ಮೊದಲನೇ ಹಂತದಲ್ಲಿ ಸಿಸ್ಟೊಸ್ಕೋಪಿ ಮತ್ತು ರೋಬೋಟ್-ಅಸಿಸ್ಟೆಡ್ ಲ್ಯಾಪರೊಸ್ಕೋಪಿಕ್ ಇಲಿಯಾಲ್ ಆಗ್ಮೆಂಟೇಶನ್ ಆಫ್ ಬ್ಲಾಡರ್ ಮಾಡುವುದು, ಎರಡನೇ ಹಂತದಲ್ಲಿ ಶಿಶ್ನಿವನ್ನು ಮರುಜೋಡಣೆ ಮಾಡಬಹುದು ಎಂದು ತಿಳಿದುಬಂತು. ಅಂತೆಯೇ, ತೆಳು ಕ್ಯಾಮರವಾದ ಸಿಸ್ಟೊಸ್ಕೋಪಿ ಮೂಲಕ ಮೂತ್ರಕೋಶದ ಒಳಭಾಗವನ್ನು ಸಂಪೂರ್ಣ ತಪಾಸಣೆಗೊಳಿಸಿ ರೋಬೋಟ್-ಅಸಿಸ್ಟೆಡ್ ಲ್ಯಾಪರೊಸ್ಕೋಪಿಕ್ ಐಲಿಯಲ್ ಬ್ಲ್ಯಾಡರ್ ಆಫ್ ಬ್ಲಾಡರ್ ನಡೆಸಲಾಯಿತು.
ಎರಡನೇ ಹಂತದಲ್ಲಿ ಬಾಹ್ಯ ಸರ್ಕಮ್‌ಫ್ಲೆಕ್ಸ್ ಇಲಿಯಾಕ್ ದ್ವೀಪದ ಚರ್ಮದ ಫ್ಲಾಪ್ ಬಳಸಿ ಶಿಶ್ನ ಪುನರ್ನಿರ್ಮಾಣ ಮಾಡಲಾ ಯಿತು. ಬಾಲಕ ವಯಸ್ಕನಾದ ನಂತರ ಲೈಂಗಿಕ ಸಂಭೋಗಕ್ಕೆ ತೊಡಕು ಆಗದಂತೆಯೂ ಸಹ ಎಚ್ಚರಿಕೆ ವಹಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮೂರನೇ ಹಂತದಲ್ಲಿ ಮೂತ್ರನಾಳದ ಪುನರ್ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಆದರೆ, ಈ ಶಸ್ತ್ರಚಿಕಿತ್ಸೆಯನ್ನು ಆರು ತಿಂಗಳ ತರುವಾಯ ಮಾಡಲು ಸಾಧ್ಯ.
ಪ್ರಸ್ತುತ ಬಾಲಕನ ಶಿಶ್ನವನ್ನು ಯಶಸ್ವಿಯಾಗಿ ಜೋಡಣೆ ಮಾಡಿದ್ದು, ಆರೋಗ್ಯವಾಗಿದ್ದಾನೆ. ಎಲ್ಲರಂತೆಯೇ ಶಿಶ್ನದ ಮೂಲಕ ಮೂತ್ರವಿಸರ್ಜನೆ ಮಾಡಬಹುದಾಗಿದೆ. ಆರು ತಿಂಗಳ ನಂತರ ಮೂರನೇ ಹಂತದ ಶಸ್ತ್ರಚಿಕಿತ್ಸೆ ಮತ್ತೊಮ್ಮೆ ಫೊರ್ಟಿಸ್ ಆಸ್ಪತ್ರೆಗೆ ಮರಳಲಿದ್ದಾರೆ ಎಂದು ವಿವರಿಸಿದರು.
ಇಂತಹ ಪ್ರಕರಣಗಳು ಅತ್ಯಂತ ಅಪರೂಪವಾಗಿದ್ದು, ನಮ್ಮ ತಂಡ ಯಶಸ್ವಿಯಾಗಿ ಈ ಶಸ್ತ್ರಚಿಕಿತ್ಸೆ ನಡೆಸಿದೆ ಎಂದರು.