Saturday, 14th December 2024

Heavy Rain: ಬಿಡುವು ನೀಡದ ಮಳೆರಾಯ: ಜನಜೀವನ ಅಯೋಮಯ 

ಮುನ್ನೆಚ್ಚರಿಕೆಯಾಗಿ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ 

ರಂಗನಾಥ ಕೆ.ಮರಡಿ

ತುಮಕೂರು : ಜಿಲ್ಲೆಯಲ್ಲಿ ಬಿಡುವು ನೀಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಯೋಮಯ ಗೊಂಡಿದೆ.

ಜಿಲ್ಲೆಯಲ್ಲಿ  ನಿರಂತರವಾಗಿ ಮಳೆಯಾಗುತ್ತಿದ್ದು, ಜನಸಾಮಾನ್ಯರು ದಿನನಿತ್ಯದ ಕೆಲಸ ಕಾರ್ಯಗಳಿಗೆ ಹಾಗೂ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು  ಪ್ರಯಾಸಪಡುವಂತಾಗಿದೆ. ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು,  ಜನತೆ ಹೊರಗೆ ತೆರಳಲು ಸಾಧ್ಯವಾಗದೆ ಹೈರಾಣಾಗಿದ್ದಾರೆ.

 ಅಧಿಕ ಮಳೆಯಾದರೆ ರಾಗಿ ಬೆಳೆ ಹಾಗೂ ತೋಟಗಳು ನೀರು ತುಂಬಿಕೊಂಡು ಬೆಳೆ ಹಾಳಾಗುವ ಆತಂಕ ರೈತರನ್ನು ಕಾಡುತ್ತಿದೆ. 

 ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಡಾಂಬರು ಕಾಣದ ರಸ್ತೆಗಳು, ನಗರ ಪ್ರದೇಶಗಳಲ್ಲಿನ ಕೆಲ ಬಡಾವಣೆಗಳ ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿವೆ. 

ನಗರ ಪ್ರದೇಶಲ್ಲಿ ವಿದ್ಯಾರ್ಥಿಗಳು, ನೌಕರರು ಹಾಗೂ ಇತರೆ ಕೂಲಿ ಕಾರ್ಮಿಕರು ದ್ವಿಚಕ್ರ ವಾಹನಗಳಲ್ಲಿ ಹೋಗಲು ಸಾಧ್ಯವಾಗದೆ ಆಟೋ ರಿಕ್ಷಾಗಳಿಗೆ ಮುಗಿ ಬೀಳುತ್ತಿದ್ದು, ಇದರಿಂದ ಆಟೋಗಳಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. 

ಈಗಾಗಲೇ ಜಿಲ್ಲೆಯಲ್ಲಿ ತುಮಕೂರು ಅಮಾನಿಕೆರೆ, ಸಿರಾ ಕೆರೆ, ಕುಣಿಗಲ್ ಕೆರೆ ಸೇರಿದಂತೆ ಹಲವಾರು ಕೆರೆಗಳು ಕೋಡಿ ಬಿದ್ದಿದ್ದು, ಮಳೆ ಹೀಗೆ ಮುಂದುವರೆದರೆ ಮತ್ತಷ್ಟು ಕೆರೆಗಳು ಭರ್ತಿಯಾಗಿ ಕೋಡಿ ಬೀಳುವ ಸಾಧ್ಯತೆ ಇದೆ. 

ಮಧುಗಿರಿ-ಕೊರಟಗೆರೆ ತಾಲ್ಲೂಕಿನಲ್ಲಿರುವ ಜಯಮಂಗಲಿ ನದಿ ತುಂಬಿ ಹರಿಯುತ್ತಿದ್ದು, ಈಗಾಗಲೇ ನದಿ ಪಾತ್ರದಲ್ಲಿ ಎಚ್ಚರಿಕೆಯಿಂದ ಓಡಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. 

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು, ಫುಟ್‌ಪಾತ್‌ಗಳು ತೊಯ್ದಿದ್ದು, ಜಡಿ ಮಳೆಯಾಗು ತ್ತಿರುವುದರಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಬಹಳ ಎಚ್ಚರಿಕೆಯಿಂದ ಓಡಾಡಬೇಕಾಗಿದೆ. 

ಗ್ರಾಮೀಣ ಭಾಗದಲ್ಲಿರುವ ಕೆರೆ, ಕಟ್ಟೆಗಳಿಗೆ ಅಧಿಕ ನೀರು ಹರಿದು ಬಂದಿದೆ. ನಗರ ವ್ಯಾಪ್ತಿಯ ತಗ್ಗು ಪ್ರದೇಶದಲ್ಲಿ ನೀರು ತುಂಬಿ ಕೆರೆಯಂತೆ ಮಾರ್ಪಾಡಾಗಿದೆ.

ಜಿಲ್ಲಾಡಳಿತ ಅಲರ್ಟ್ ಘೋಷಣೆ 

ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಆರೆಂಜ್ ಮತ್ತು ಯೆಲ್ಲೊ ಅಲರ್ಟ್ ಘೋಷಿಸಲಾಗಿದ್ದು, ತುರ್ತು ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಜನ, ಜಾನುವಾರುಗಳಿಗೆ ಜೀವ ಹಾನಿಯಾಗದಂತೆ ನದಿ, ಹಳ್ಳ ಕೆರೆ ದಡಗಳಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ದನ, ಕರುಗಳನ್ನು ಮೇಯಿಸುವುದು ಹಾಗೂ ಅಪಾಯವಿರುವ ಸೇತುವೆ ಗಳ ಮೇಲೆ ಸಂಚರಿಸುವುದು ಮತ್ತು ಇತರೆ ಚಟುವಟಿಕೆ ನಡೆಸದಂತೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ ಇತರೆ ಕಟ್ಟಡಗಳು ಕುಸಿದು ಸಾವು- ನೋವುಗಳು ಸಂಭವಿ ಸುವುದರಿಂದ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿರುವಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ರಾಜ್ಯ, ಜಿಲ್ಲಾಡಳಿತ, ತಾಲೂಕು ಆಡಳಿತದಿಂದ ನೀಡುವ ಹವಾಮಾನದ ಮುನ್ನೆಚ್ಚರಿಕೆಯನ್ನು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿಗಳು ನೀಡುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಹೆಚ್ಚು ಪ್ರಚಾರ ಕೈಗೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ನಿರ್ದೇಶಿಸಿದರು. 

 ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿ ೭೩೦೪೯೭೫೫೧೯ ಅಥವಾ ದೂರವಾಣಿ  : ೦೮೧೬-೨೨೧೩೪೦೦, ೦೮೧೬-೧೫೫೩೦೪ ಅಥವಾ ವಾಟ್ಸಪ್ ಸಂಖ್ಯೆ: ೭೩೦೪೯೭೫೫೧೯ನ್ನು ಸಂಪರ್ಕಿಸಬೇಕೆಕದು ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು. 

ಇದನ್ನೂ ಓದಿ: Tumkur_KannadaRajyotsava: ವೈಭವಯುತ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ