ಬೆಂಗಳೂರು: ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಿ ರೈಲ್ವೆ ಮಾರ್ಗಗಳ ದುರಸ್ಥಿ ಕಾರ್ಯ ನಡೆಯುತ್ತಿರುವುದರಿಂದ ಹಾಸನದಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರು, ಕೇರಳ, ಕಾರವಾರ, ವಿಜಯಪುರಕ್ಕೆ ಸಂಚರಿಸುವ ರೈಲುಗಳ ಸೇವೆಯನ್ನು ಇನ್ನೂ ಮೂರು ದಿನ ಆರಂಭಿಸದಿರಲು ನಿರ್ಧರಿಸಲಾಗಿದೆ.
ಈ ಹಿಂದಿನ ಆದೇಶದಂತೆ ಕೆಲವು ರೈಲುಗಳು ಆಗಸ್ಟ್ 4ರ ಶನಿವಾರವೇ ಸಂಚಾರ ನಿಲ್ಲಿಸಿದ್ದವು. ಆಗಸ್ಟ್ 5 ಹಾಗೂ 6ರ ಭಾನುವಾರ ಹಾಗೂ ಸೋಮವಾರದಂದೂ ಕೂಡ ಕೆಲವು ರೈಲುಗಳ ಸಂಚಾರವನ್ನು ಸಂಪೂರ್ಣ ರದ್ದುಪಡಿಸಲಾಗಿತ್ತು. ಈಗ ಇದೇ ರೈಲುಗಳು ಆಗಸ್ಟ್ 8ರವರೆಗೂ ಸಂಚರಿಸುವುದಿಲ್ಲ ಎಂದು ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
ನೈಋತ್ಯ ರೈಲ್ವೆ ವ್ಯಾಪ್ತಿಯ ಎಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ಮಧ್ಯೆ ಗುಡ್ಡ ಕುಸಿತ ಉಂಟಾಗಿರುವ ಕಾರಣ ಆ.6, 7 ಮತ್ತು 8ರಂದು ಹಲವು ರೈಲು ಸಂಚಾರ ರದ್ದು ಪಡಿಸಲಾಗಿದೆ. ಇದರಲ್ಲಿ ಆಗಸ್ಟ್ 6, 7ರಂದು ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ (ರೈಲು ನಂ. 16511) , ಆ.7 ಮತ್ತು 8 ರಂದು ಕಣ್ಣೂರು- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ನಂ.16512) , ಆ.6, 7 ರಂದು ಕೆಎಸ್‌ಆರ್ ಬೆಂಗಳೂರು-ಕಾರವಾರ ಸ್ಪೆಷಲ್ ಎಕ್ಸ್ಪ್ರೆಸ್ (ರೈಲು ನಂ. 16595) , ಆ. 7 ಮತ್ತು 8ರಂದು ಕಾರವಾರ -ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ನಂ. 16596) ಸಂಪೂರ್ಣ ರದ್ದು ಮಾಡಲಾಗಿದೆ.
ಆ.6, 7 ರಂದು ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ (ರೈಲು ನಂ. 16585), ಆ.7 ಮತ್ತು 8 ರಂದು ಮುರುಡೇಶ್ವರ -ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ (ರೈಲು ನಂ.16586), ಆ.6, 7 ರಂದು ವಿಜಯಪುರ- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ರೈಲು ನಂ. 07377), ಆ.7 ಮತ್ತು 8 ರಂದು ಮಂಗಳೂರು ಸೆಂಟ್ರಲ್ – ವಿಜಯಪುರ ಸ್ಪೆಷಲ್ ಎಕ್ಸ್ಪ್ರೆಸ್ (ರೈಲು ನಂ.07378) ಸಂಪೂರ್ಣ ರದ್ದು ಪಡಿಸಲಾಗಿದೆ.
ಆ.7 ರಂದು ಯಶವಂತಪುರ ಜಂಕ್ಷನ್-ಕಾರವಾರ ಎಕ್ಸ್‌ಪ್ರೆಸ್ (ರೈಲು ನಂ.16515) , ಆ. 8 ರಂದು ಕಾರವಾರ -ಯಶವಂತಪುರ ಜಂಕ್ಷನ್ (ರೈಲು ನಂ.18516), ಆ.6 ರಂದು ಯಶವಂತ ಪುರ ಜಂಕ್ಷನ್-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (ರೈಲು ನಂ. 16575), ಆ.7 ರಂದು ಮಂಗಳೂರು ಜಂಕ್ಷನ್ – ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ (ರೈಲು ನಂ. 16576) ಸಂಪೂರ್ಣ ರದ್ದು ಮಾಡಲಾಗಿದೆ. ಮಲೆನಾಡು, ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲುಗಳ ಸಂಚಾರ ವ್ಯತ್ಯಯದಿಂದ ಪ್ರಯಾಣಿಕರಿಗೆ ತೊಂದರೆಯಾಗಲಿದ್ದು. ಸಹಕರಿಸಬೇಕು ಎಂದು ಕೋರಲಾಗಿದೆ.