Friday, 13th December 2024

ಪೊಲೀಸರ ಮೇಲಿನ ಸಿಟ್ಟು: ಹೊಯ್ಸಳ ವಾಹನ ಬೆಂಕಿಗೆ ಆಹುತಿ

ಬೆಂಗಳೂರು: ಪೊಲೀಸರ ಮೇಲಿನ ಸಿಟ್ಟಿನಿಂದಾಗಿ ಯುವಕನೊಬ್ಬ ಹೊಯ್ಸಳ ವಾಹನದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ಹೊಯ್ಸಳ ವಾಹನ ಬೆಂಕಿಗೆ ಆಹುತಿಯಾಗಿದೆ.

ಈ ಕುರಿತು ಸ್ವಯಂ ದೂರು ದಾಖಲಿಸಿಕೊಂಡ ಸಿಟಿ ಮಾರ್ಕೆಟ್ ಪೊಲೀ ಸರು, ಆರೋಪಿ ಧೀರಜ್ ಕುಮಾರ್ (19) ಎಂಬಾತ ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಟಿ ಮಾರ್ಕೆಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಧೀರಜ್‌ ಕುಮಾರ್, ಪಾದಚಾರಿ ಮಾರ್ಗದಲ್ಲಿ ಮಲಗುತ್ತಿದ್ದ. ಇದರ ನಡುವೆ ಹೊಯ್ಸಳ ಸಿಬ್ಬಂದಿ, ಆರೋಪಿಗೆ ನಿಂದಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಪೊಲೀಸರ ಮೇಲೆ ಕೋಪಗೊಂಡ ಧೀರಜ್, ಸೋಮವಾರ ಮಧ್ಯಾಹ್ನ ಪೆಟ್ರೋಲ್ ತಂದು ಹೊಯ್ಸಳ ವಾಹನದ ಮೇಲೆ ಎರಚಿ ಬೆಂಕಿ ಹಚ್ಚಿದ್ದಾನೆ. ಆರೋಪಿ ಕೃತ್ಯದಿಂದ ಹೆದರಿದ ಅಕ್ಕಪಕ್ಕದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಬೆಂಕಿ ನಂದಿಸಿದ್ದಾರೆ.