Wednesday, 11th December 2024

ಅಂತರಾಜ್ಯ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ಹಿಂಸಾಚಾರ ಸ್ವರೂಪ ಪಡೆದುಕೊಂಡಿದ್ದು, ಕರ್ನಾಟಕಕ್ಕೆ ಸೇರಿದ ಕೆಕೆಆರ್ಟಿಸಿ ಬಸ್ಸಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಹೊರಡುವ ರಾಜ್ಯದ ಅಂತರಾಜ್ಯ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸೋಮವಾರ ಕಾರ್ಯಾಚರಣೆಯಲ್ಲಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಕೆಕೆಆರ್ಟಿಸಿ ಬಸ್ಸಿಗೆ ಬೆಂಕಿ ಹಚ್ಚಿದ ಪರಿಣಾಮ ಅಂತರ ರಾಜ್ಯ ಬಸ್ ಕಾರ್ಯಾಚರಣೆಯನ್ನು ತಾತ್ಮಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರು ಹೇಳಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿಯಿಂದ ಪುಣೆಗೆ ಹೊರಟಿದ್ದ ಬಸ್ ಗೆ ಮಹಾರಾಷ್ಟ್ರದ ಉಮರ್ಗಾ ಬಳಿಯ ತರುರಿ ಗ್ರಾಮದಲ್ಲಿ ಪ್ರತಿಭಟನಾಕಾರರು ಬಸ್ ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ತುಳಜಾಪುರ ಯಾತ್ರೆ ಸೇರಿದಂತೆ ಮಹಾರಾಷ್ಟ್ರಕ್ಕೆ ಅಂತರಾಜ್ಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಮರಾಠ ಮೀಸಲಾತಿಗೆ ಒತ್ತಾಯಿಸಿ ಕಳೆದ ಆಗಸ್ಟ್​ ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಕ್ಟೋಬರ್​ 25ರಂದು ಜಲ್ನಾ ಜಿಲ್ಲೆಯ ಅಂತರವಾಲಿ ಸಾರತಿ ಗ್ರಾಮದಲ್ಲಿ ಅನಿರ್ದಿಷ್ಟವಾಧಿ ಉಪವಾಸ ಸತ್ಯಾಗ್ರಹ ಆರಂಭಗೊಂಡಿತ್ತು. ಇದರಿಂದಾಗಿ ಮತ್ತೆ ರಾಜ್ಯಾದ್ಯಂತ ಮರಾಠ ಮೀಸಲಾತಿ ಹೋರಾಟ ತೀವ್ರಗೊಂಡಿದೆ.

ಇದೀಗ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಶಾಸಕರ ಮನೆ ಮೇಲೆ ಕಲ್ಲು ತೂರಾಟ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್​ಗೆ ಪ್ರತಿಭಟನಾಕಾರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀಸಲಾತಿಗಾಗಿ ಆಗ್ರಹಿಸಿ ಹೋರಾಟಗಾರ ಮನೋಜ್​ ಜಾರಂ ಇಲ್ಲಿನ ಮುಂಬೈನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಇವರ ಉಪವಾಸ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿಟ್ಟಿದೆ.