Saturday, 5th October 2024

ಎಕ್ಸ್’ಪ್ರೆಸ್ ವೇ ಅಲ್ಲ, ನಿಯಂತ್ರಿತ ಹೆದ್ದಾರಿಯಷ್ಟೇ

ಬೆಂಗಳೂರು: ಬೆಂಗಳೂರು-ಮೈಸೂರು ರಸ್ತೆ ೧೦೦ ಕಿ.ಮೀ. ವೇಗಮಿತಿ ಇರುವ ರಾಷ್ಟ್ರೀಯ ಹೆದ್ದಾರಿಯೇ ಹೊರತು ೧೨೦ ಕಿ.ಮೀ. ವೇಗದಲ್ಲಿ ವಾಹನ
ಓಡಿಸುವ ಎಕ್ಸಪ್ರೆಸ್ ವೇ ಅಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್‌ಎಐ) ಸ್ಪಷ್ಟಪಡಿಸಿದೆ.

ದೇಶದ ಇತರ ಕಡೆಗಳಲ್ಲಿ ಇರುವ ಎಕ್ಸ್‌ಪ್ರೆಸ್ ವೇಯಂತೆ ಇದು ಕೂಡ ಎಂದು ಜನರು ಗೊಂದಲ ಮಾಡಿಕೊಂಡು ಗರಿಷ್ಠ ವೇಗದ ಮಿತಿ ಗಂಟೆಗೆ ೧೨೦ ಕಿ.ಮೀ. ಇದೆ ಎಂದು ಭಾವಿಸಿದ್ದಾರೆ. ಆದರೆ, ನಮ್ಮ ಅಧಿಸೂಚನೆಯಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಮೂಲ ಸೌಕರ್ಯವು ಎಕ್ಸ್‌ಪ್ರೆಸ್‌ವೇಯಂತೆ ಕಾಣುವುದರಿಂದ ಜನರು ಇದನ್ನು ಹಾಗೆ ಕರೆಯುತ್ತಿರಬಹುದು ಎಂದು ಎನ್‌ಎಚ್‌ಎಐನ ಪ್ರಾದೇಶಿಕ ಅಧಿಕಾರಿ ವಿವೇಕ್ ಜೈಸ್ವಾಲ್ ಅವರು ಹೇಳಿದ್ದಾರೆ.

ಆ.೧ರಿಂದ ಈ ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳು ಸೇರಿದಂತೆ ಕೆಲವು ವಾಹನಗಳ ಓಡಾಟ ನಿರ್ಬಂಧಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಎನ್‌ಎಚ್‌ಎಐ ಈ ಸ್ಪಷ್ಟನೆ ನೀಡಿದೆ. ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಗರಿಷ್ಠ ವೇಗದ ಮಿತಿ ೧೦೦ ಕಿ.ಮೀ. ಆಗಿದೆ. ದೇಶದ ಇತರ ಕಡೆಗಳಲ್ಲಿ ಇರುವ ಎಕ್ಸ್‌ಪ್ರೆಸ್ ವೇಯಂತೆ ಇದು ಕೂಡ ಎಂದು ಜನರು ಗೊಂದಲ ಮಾಡಿಕೊಂಡು ಗರಿಷ್ಠ ವೇಗದ ಮಿತಿ ಗಂಟೆಗೆ ೧೨೦ ಕಿ.ಮೀ. ಇದೆ ಎಂದು ಭಾವಿಸಿದ್ದಾರೆ. ಆದರೆ, ನಮ್ಮ ಅಧಿಸೂಚನೆಗಳು ಇದು ಪ್ರವೇಶ ನಿಯಂತ್ರಿತ ಹೆದ್ದಾರಿಯೇ ಹೊರತು ಎಕ್ಸ್‌ಪ್ರೆಸ್‌ವೇ ಅಲ್ಲ ಎಂದು ಸ್ಪಷ್ಟವಾಗಿ ಹೇಳುತ್ತವೆ ಎಂದು ಹೇಳಿದೆ.

ಆಟೋಗಳು, ಬೈಕ್‌ಗಳು ಮತ್ತು ಇತರ ನಿಧಾನವಾಗಿ ಚಲಿಸುವ ವಾಹನಗಳ ವೇಗದ ಮಿತಿಯು ಗರಿಷ್ಠ ಗಂಟೆಗೆ ೮೦ ಕಿ.ಮೀ. ಇರುತ್ತದೆ. ಹೀಗಾಗಿ ಅವುಗಳನ್ನು ಹೆದ್ದಾರಿಯಲ್ಲಿ ನಿರ್ಭಂಧಿಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಹೆದ್ದಾರಿ ಉದ್ಘಾಟನೆ ಒಂದು ದಿನ ಮೊದಲು ಪ್ರಧಾನಿಯವರ ಟ್ವಿಟರ್ ಹ್ಯಾಂಡಲ್‌ನಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗು ವುದು ಎಂದು ಪೋಸ್ಟ್ ಮಾಡಲಾಗಿತ್ತು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೂಡ ಯೋಜನೆಯ ಪ್ರಗತಿಯ ಮತ್ತು ಅದರ ವೈಶಿಷ್ಠ್ಯಗಳ ವಿವರ ಹಂಚಿಕೊಳ್ಳುವಾಗ ಎಕ್ಸ್ ಪ್ರೆಸ್ ವೇ ಎಂದೇ ಹೇಳಿದ್ದರು. ರಸ್ತೆ ಉದ್ಘಾಟನೆಗೂ ಮುನ್ನ ರಾಜ್ಯದಲ್ಲಿನ ಬಿಜೆಪಿ ಸರಕಾರ ಪ್ರಕಟಿಸಿದ ಜಾಹೀರಾತುಗಳಲ್ಲಿ ಕೂಡ ಎಕ್ಸ್‌ಪ್ರೆಸ್ ವೇ ಎಂದು ತಿಳಿಸಲಾಗಿತ್ತು.

*
ಕೆಲವು ವಾಹನಗಳ ಓಡಾಟ ನಿರ್ಬಂಧಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಎನ್‌ಎಚ್‌ಎಐ ಸ್ಪಷ್ಟನೆ

ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಗರಿಷ್ಠ ವೇಗದ ಮಿತಿ ೧೦೦ ಕಿ.ಮೀ.

ದೇಶದ ಇತರೆಡೆಯಿರುವ ಎಕ್ಸ್‌ಪ್ರೆಸ್ ವೇ ರೀತಿ ಇದೂ ಗರಿಷ್ಠ ವೇಗದ ಮಿತಿ ಗಂಟೆಗೆ ೧೨೦ ಕಿ.ಮೀ. ಎಂದು ಭಾವಿಸಿದ್ದ ಜನ.