Saturday, 23rd November 2024

ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕುಪೇಂದ್ರರೆಡ್ಡಿ ನಾಮಪತ್ರ ಸಲ್ಲಿಕೆ

ಬೆಂಗಳೂರು: ರಾಜ್ಯಸಭಾ ಚುನಾವಣಾ ಕಣಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕುಪೇಂದ್ರರೆಡ್ಡಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಕುಪೇಂದ್ರ ರೆಡ್ಡಿ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 2014 ರಿಂದ ಜೆಡಿಎಸ್ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

 

ಉದ್ಯಮಿ ಕುಪೇಂದ್ರರೆಡ್ಡಿ 20 ವರ್ಷದಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಶ್ರೀಮಂತ ಉದ್ಯಮಿಯಾಗಿರುವ ಕುಪೇಂದ್ರರೆಡ್ಡಿ ಅವರು, 2014 ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದರು. ಇನ್ನು ರಾಜ್ಯಸಭೆಯಲ್ಲಿ ರಾಜ್ಯದ ಪರ ಅತಿ ಹೆಚ್ಚು ಪ್ರಶ್ನೆ ಕೇಳಿದ್ದಾರೆ ಎಂಬ ಕೀರ್ತಿಗೆ ಕುಪೇಂದ್ರರೆಡ್ಡಿ ಪಾತ್ರರಾಗಿದ್ದಾರೆ.

ಬೆಂಗಳೂರಿನಲ್ಲಿ ಕೆರೆಗಳ ಸಂರಕ್ಷಣೆ ಹೋರಾಟದ ಮುಂದಾಳತ್ವ ವಹಿಸಿದ್ದ ಕುಪೇಂದ್ರ ರೆಡ್ಡಿ ಅವರು, ಅಗರ, ವರ್ತೂರು ಮತ್ತು ಬೆಳ್ಳಂದೂರು ಕೆರೆಗಳ ರಕ್ಷಣೆಯಲ್ಲಿ ಪಾತ್ರ ವಹಿಸಿದ್ದರು. ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೋರಾಟ ಮಾಡಿದ್ದು ಉಲ್ಲೇಖಾರ್ಹ.

ಕೇವಲ 33 ಶಾಸಕರ ಬಲ ಹೊಂದಿರುವ ಜೆಡಿಎಸ್‌ನ ಕುಪೇಂದ್ರರೆಡ್ಡಿ ಗೆಲುವು ಅಷ್ಟು ಸುಲಭವಾಗಿಲ್ಲ. ಕಾಂಗ್ರೆಸ್ ಎರಡನೇ ಅಭ್ಯರ್ಥಿ ಕಣಕ್ಕೆ ಇಳಿಸಿದೆ. ಬಿಜೆಪಿ ಕೂಡ ತನ್ನ ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ಅನ್ಯ ಪಕ್ಷದ ಮತ ಗಳನ್ನು ಸೆಳೆಯುವ ತಂತ್ರದಲ್ಲಿ ಮುಳುಗಿವೆ.

ಜೆಡಿಎಸ್ ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ರಾಜ್ಯಸಭೆಗೆ ಆಯ್ಕೆಯಾಗಲು ಜೆಡಿಎಸ್ ಗೆ ಇನ್ನೂ 12-13 ಶಾಸಕರ ಮತಗಳು ಬೇಕು. ಕಾಂಗ್ರೆಸ್ ಉಳಿಕೆ ಮತ ಗಳಿಸುವ ನಿಟ್ಟಿನಲ್ಲಿ ಕುಪೇಂದ್ರರೆಡ್ಡಿ ಪ್ರಯತ್ನ ಮಾಡಿದ್ದರು. ಕುಪೇಂದ್ರರೆಡ್ಡಿ ಪ್ರಯತ್ನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಎಳ್ಳನೀರು ಬಿಟ್ಟಿದ್ದಾರೆ. ಎರಡನೇ ಅಭ್ಯರ್ಥಿಯನ್ನಾಗಿ ಮನ್ಸೂರ್ ಆಲಿಖಾನ್ ಅವರನ್ನು ಕಣಕ್ಕೆ ಇಳಿಸಿ ಟಾಂಗ್ ಕೊಟ್ಟಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಮತಗಳಿಗೆ ಗಾಳ ಹಾಕಿದ್ದಾರೆ. ತಮ್ಮ ಕುಲ ಬಾಂಧವನನ್ನು ಗೆಲ್ಲಿಸುವ ನಿಟ್ಟಿನಲ್ಲಿ ಜೆಡಿಎಸ್ ಶಾಸಕರ ಮತ ಸೆಳೆಯುವ ಕಾರ್ಯವನ್ನು ಚಾಮರಾಜಪೇಟೆ ಜಮೀರ್ ಬಾಯ್ ಅವರಿಗೆ ವಹಿಸಿದ್ದಾರೆ.