ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ ಎಲ್ಲಾ 224 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಿದೆ.
ರಾಷ್ಟ್ರೀಯ ಲೋಕಜನಶಕ್ತಿ ಪಕ್ಷದ ರಾಜ್ಯಾಧ್ಯಕ್ಷರಾದ ಶಿಲ್ಪ ಬಾಬು ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ರಾಜ್ಯ ಕಾರ್ಯ ಕಾರಣಿ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಲ್ಪ ಬಾಬು ಆರ್.ಎಲ್.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಪಶುಪತಿ ಕುಮಾರ್ ಪರಸ್ ಅವರ ಸೂಚನೆಯಂತೆ ಈ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸುತ್ತಿಲ್ಲ. ಆದರೆ ಎಲ್ಲಾ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದೇವೆ. ಬಿಜೆಪಿ ಪರ ಈಗಾಗಲೇ ಪ್ರಚಾರದಲ್ಲಿ ನಿರತ ರಾಗಿರುವುದಾಗಿ ಹೇಳಿದರು.
ರಾಜ್ಯ ಬಿಜೆಪಿ ನಾಯಕರ ಸಹಯೋಗ ಮತ್ತು ಸಮನ್ವಯತೆಯಿಂದ ಎಲ್ಲಾ ಕ್ಷೇತ್ರಗಳಲ್ಲಿ ಮತಯಾಚಿಸುತ್ತಿದ್ದೇವೆ. ಬಿಜೆಪಿ ರಾಷ್ಟ್ರೀಯ ವಿಚಾರಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದು, ಎನ್.ಡಿ.ಎ ಮೈತ್ರಿಕೂಟದ ಎರಡನೇ ಅತಿ ದೊಡ್ಡ ಪಕ್ಷವಾಗಿದೆ. ಬಿಜೆಪಿ ರಾಷ್ಟ್ರೀಯ ವಿಷಯಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದು, ದೇಶದ ಹಿತ ದೃಷ್ಟಿಯಿಂದ ಬಿಜೆಪಿಯನ್ನು ಬೆಂಬಲಿಸುವಂತೆ ಮತದಾರ ರನ್ನು ಮನವೊಲಿಸುತ್ತಿದ್ದೇವೆ ಎಂದು ತಿಳಿಸಿದರು.
ಪ್ರಚಾರ ನಡೆಸಲಿದೆ ಎಂದು ರಾಷ್ಟ್ರೀಯ ಲೋಕಜನಶಕ್ತಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್ ಶರಾಫ್ ಮಾತ ನಾಡಿ, ಆರ್‌ಎಲ್‌ಜೆಪಿ ಯುವಮೋರ್ಚಾ, ಮಹಿಳಾ ಮೋರ್ಚಾ, ಜನಶಕ್ತಿ ಮಸ್ದೂರ್ ಸಂಗಮ್ ಮತ್ತು ದಲಿತ ಸೇನೆಯ ವಿವಿಧ ಶಾಖೆಗಳು ಬಿಜೆಪಿ ಪರವಾಗಿ ಪ್ರಚಾರ ಕಣದಲ್ಲಿವೆ. ಜನ ಸಾಮಾನ್ಯರಿಗೆ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ ಲೋಕಜನಶಕ್ತಿ ಪಕ್ಷ ವನ್ನು ಪರಿಣಾಮಕಾರಿಯಾಗಿ ಸಂಘಟಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಎಂಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜ್ ಜಿ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಬಿಜು, ಆರ್.ಎಲ್.ಜೆ.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಲಕ್ಷಣ್, ಖಜಾಂಚಿ ರೀಮಾ ಲಕ್ಷಣ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಮುರಳಿ ನಾಯರ್ ಉಪಸ್ಥಿತರಿದ್ದರು.