Wednesday, 11th December 2024

Mahalaxm Murder Case: “ನಾನು ಅವಳನ್ನು ಕೊಲ್ಲದಿದ್ದರೆ ಅವಳೇ ನನ್ನ ಕೊಲ್ತಿದ್ಲು…” ಕೊಲೆಗಾರನ ಡೆತ್‌ನೋಟ್‌ನಲ್ಲಿತ್ತು ವಿವರ!

Bengaluru woman murder

ಬೆಂಗಳೂರು: “ನಾನು ಅವಳನ್ನು ಕೊಲ್ಲದಿದ್ದರೆ ಮಹಾಲಕ್ಷ್ಮಿ ನನ್ನನ್ನೇ ಕೊಲ್ಲುತ್ತಿದ್ದಳು…” ಎಂದು ಕಳೆದ ತಿಂಗಳು ಬೆಂಗಳೂರಿನಲ್ಲಿ (Bangalore Crime News) ತನ್ನ ಪ್ರೇಯಸಿಯನ್ನು ಕೊಂದು (Mahalaxm Murder Case) ಕತ್ತರಿಸಿ ಫ್ರಿಜ್‌ನಲ್ಲಿಟ್ಟು ಆತ್ಮಹತ್ಯೆ (Self Harming) ಮಾಡಿಕೊಂಡ ಕೊಲೆಗಾರ ಡೆತ್‌ನೋಟ್‌ನಲ್ಲಿ (Death note) ಬರೆದಿಟ್ಟುದು ಗೊತ್ತಾಗಿದೆ. ಯಾಕೆ ಎಂಬ ವಿವರಗಳನ್ನೂ ಆತ ಬರೆದಿಟ್ಟಿದ್ದಾನೆ.

ಸೆಪ್ಟೆಂಬರ್ 1ರಂದು ಮಹಾಲಕ್ಷ್ಮಿ (29) ಬೆಂಗಳೂರಿನ ತನ್ನ ಉದ್ಯೋಗದ ಸ್ಥಳದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಳು. ಆ ದಿನವೇ ಆಕೆಯ ಟೀಮ್‌ ಮುಖ್ಯಸ್ಥ ಮತ್ತು ಗೆಳೆಯ ಮುಕ್ತಿ ರಂಜನ್ ರಾಯ್ ಕೂಡ ಕೊನೆಯದಾಗಿ ಕಾಣಿಸಿಕೊಂಡಿದ್ದ. ವಾರದ ಬಳಿಕ ಆಕೆಯ ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದವರು ಆಕೆಯ ಸಂಬಂಧಿಕರಿಗೆ ತಿಳಿಸಿದ್ದರು.

ಮಹಾಲಕ್ಷ್ಮಿಯ ತಾಯಿ ಆಕೆಯ ಮನೆಯನ್ನು ಸೆಪ್ಟೆಂಬರ್ 21 ರಂದು ತಲುಪಿದಾಗ, ಮಗಳ ಬದಲಾಗಿ ಆಕೆಯ ಶವದ ತುಣುಕುಗಳು ಫ್ರಿಜ್‌ನಲ್ಲಿ ಕಂಡುಬಂದಿದ್ದವು. ವಾಶ್‌ರೂಮ್‌ನಲ್ಲಿ ಆಕೆಯ ರಕ್ತ ಕಂಡುಬಂದಿತ್ತು. ಮಹಾಲಕ್ಷ್ಮಿಯನ್ನು ಕೊಂದ ನಂತರ ಆಕೆಯ ಗೆಳೆಯ ದೇಹವನ್ನು 50ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿ ತುಂಬಿಸಿಟ್ಟಿದ್ದ.

ಪೊಲೀಸರು ರಾಯ್‌ನನ್ನು ಆತನ ಊರಾದ ಒಡಿಶಾದ ಭದ್ರಕ್‌ನಲ್ಲಿ ಪತ್ತೆಹಚ್ಚಿದ್ದರು. ಆದರೆ ಅವರು ತಲುಪುವಷ್ಟರಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಶವದ ಬಳಿ, ಅವನ ಡೆತ್‌ನೋಟ್‌ ದೊರೆತಿತ್ತು. ಸೆಪ್ಟೆಂಬರ್ 2 ಮತ್ತು 3ರ ಮಧ್ಯರಾತ್ರಿ ಆಕೆಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಪತ್ರದಲ್ಲಿ ಒಪ್ಪಿಕೊಂಡಿದ್ದ. ಮರುದಿನ ಬೆಳಗ್ಗೆ ಮಾರ್ಕೆಟ್‌ನಿಂದ ಹರಿತವಾದ ಚಾಕು ಖರೀದಿಸಿ ತಂದು, ಆಕೆಯ ದೇಹವನ್ನು ವಾಶ್‌ರೂಮ್‌ನಲ್ಲಿ ತುಂಡಾಗಿ ಕತ್ತರಿಸಿ ಫ್ರಿಜ್‌ನಲ್ಲಿ ಭಾಗಗಳನ್ನು ತುಂಬಿಸಿದ್ದ. ಒಡಿಶಾಗೆ ಪಲಾಯನ ಮಾಡುವ ಮೊದಲು ಆಸಿಡ್‌ನಿಂದ ಕೋಣೆಯನ್ನು ಸ್ವಚ್ಛಗೊಳಿಸಿದ್ದ.

“ಮಹಾಲಕ್ಷ್ಮಿ ತನ್ನನ್ನು ಕೊಲ್ಲಲು ಬಯಸಿದ್ದಳು. ಮತ್ತು ಅವನ ದೇಹವನ್ನು ವಿಲೇವಾರಿ ಮಾಡಲು ಕಪ್ಪು ಸೂಟ್‌ಕೇಸ್ ಅನ್ನು ಸಹ ಖರೀದಿಸಿದ್ದಳು” ಎಂದು ಡೆತ್‌ನೋಟ್‌ನಲ್ಲಿ ಮುಕ್ತಿರಂಜನ್‌ ಬರೆದಿದ್ದಾನೆ. ಮಹಾಲಕ್ಷ್ಮಿ ಮನೆಯೊಳಗಿನ ಫ್ರಿಡ್ಜ್ ಬಳಿ ದೊಡ್ಡ ಕಪ್ಪು ಸೂಟ್ಕೇಸ್ ಕೂಡ ಪತ್ತೆಯಾಗಿದೆ.

“ನನ್ನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಸೂಟ್‌ಕೇಸ್‌ನಲ್ಲಿ ಹಾಕಿ ನಂತರ ಎಸೆಯುವುದು ಅವಳ ಉದ್ದೇಶವಾಗಿತ್ತು. ನಾನು ಅವಳನ್ನು ಕೊಲ್ಲದಿದ್ದರೆ, ಮಹಾಲಕ್ಷ್ಮಿ ನನ್ನನ್ನು ಕೊಂದು ನನ್ನ ದೇಹವನ್ನು ಎಸೆಯುತ್ತಿದ್ದಳು. ನಾನು ಅವಳನ್ನು ಆತ್ಮರಕ್ಷಣೆಗಾಗಿ ಕೊಂದಿದ್ದೇನೆ” ಎಂದು ಆತ ಪತ್ರದಲ್ಲಿ ಬರೆದಿದ್ದಾನೆ.

ಮುಕ್ತಿ ರಂಜನ್ ರಾಯ್ ಆತ್ಮಹತ್ಯೆ ಪತ್ರದ ಪ್ರಕಾರ, ಮಹಾಲಕ್ಷ್ಮಿ ಮದುವೆಯಾಗುವಂತೆ ತನಗೆ ಒತ್ತಡ ಹೇರುತ್ತಿದ್ದಳು. ತನ್ನ ಬೇಡಿಕೆ ಈಡೇರಿಸಲು ವಿಫಲವಾದಾಗ ಮಹಾಲಕ್ಷ್ಮಿ ನನ್ನನ್ನು ಥಳಿಸುತ್ತಿದ್ದಳು ಎಂದು ಅವರು ಟಿಪ್ಪಣಿಯಲ್ಲಿ ಆರೋಪಿಸಿದ್ದಾರೆ. ಚಿನ್ನದ ಸರ ಮತ್ತು ₹ 7 ಲಕ್ಷ ನೀಡಿದ್ದರೂ ಸಹ ಮಹಾಲಕ್ಷ್ಮಿಯ ಬೇಡಿಕೆ ನಿರಂತರವಾಗಿ ಹೆಚ್ಚುತ್ತಲೇ ಇತ್ತು. ಆಕೆಯೂ ನನ್ನನ್ನು ಥಳಿಸಿದ್ದಾಳೆ ಎಂದು ಆತ ಬರೆದಿದ್ದಾನೆ.

ತ್ರಿಪುರಾ ಮೂಲದ ಮಹಾಲಕ್ಷ್ಮಿ ಬೆಂಗಳೂರಿನ ಒಂದು ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಗೆ ಈಗಾಗಲೇ ಮದುವೆಯಾಗಿ ಒಂದು ಮಗುವಿತ್ತು, ಆದರೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.

ಸದ್ಯದಲ್ಲೇ ಪ್ರಕರಣದ ಆರೋಪಪಟ್ಟಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. “ಮುಕ್ತಿರಂಜನ್‌ ಆತ್ಮಹತ್ಯೆ ಪತ್ರ ಮತ್ತು ಮರಣೋತ್ತರ ಪರೀಕ್ಷೆಯ ವರದಿಯನ್ನು ಒಡಿಶಾ ಪೊಲೀಸರಿಂದ ನಾವು ಪಡೆದುಕೊಂಡಿದ್ದೇವೆ. ಶೀಘ್ರದಲ್ಲೇ ಚಾರ್ಜ್‌ಶೀಟ್ ಸಲ್ಲಿಸುತ್ತೇವೆ” ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಹೇಳಿದ್ದಾರೆ.

ರಾಯ್ ಆಕೆಯ ದೇಹವನ್ನು ಕತ್ತರಿಸಲು ಬಳಸಿದ ಆಯುಧ ಇದುವರೆಗೆ ಪತ್ತೆಯಾಗಿಲ್ಲ. ಆದರೆ ಬೆಂಗಳೂರಿನ ವೈಯಾಲಿಕಾವಲ್ ಮಾರುಕಟ್ಟೆಯಲ್ಲಿ ಗೃಹಬಳಕೆಗೆ ಬಳಸುವ ಕಟ್ಟರ್‌ಗಳ ಸಣ್ಣ ಅಂಗಡಿಯನ್ನು ನಡೆಸುತ್ತಿರುವ ಮಹಿಳೆಯೊಬ್ಬರು, ಚಾಕು ಖರೀದಿಸಿದ ಆತನ ಫೋಟೋವನ್ನು ಗುರುತಿಸಿದ್ದಾರೆ.

ದಿಲ್ಲಿಯಲ್ಲಿ ನಡೆದ ಕುಖ್ಯಾತ ಶ್ರದ್ಧಾ ವಾಳ್ಕರ್ ಕೊಲೆ ಪ್ರಕರಣದ ಜೊತೆಗಿನ ಹೋಲಿಕೆಯಿಂದಾಗಿ ಈ ಘಟನೆ ದೇಶವ್ಯಾಪಿ ಸುದ್ದಿಯಾಗಿತ್ತು. ಶ್ರದ್ಧಾ ವಾಳ್ಕರ್ (27) ಳನ್ನು ಆಕೆಯ ಲಿವ್-ಇನ್ ಸಂಗಾತಿ ಅಫ್ತಾಬ್ ಅಮೀನ್ ಪೂನಾವಾಲಾ ಕೊಂದು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಹಾಕಿದ್ದ.

ಇದನ್ನೂ ಓದಿ: Bengaluru Woman Murder: ಬೈಕಿನಲ್ಲೇ 1500 ಕಿಲೋಮೀಟರ್‌ ಪರಾರಿಯಾಗಿದ್ದ ಕೊಲೆಗಾರ!