Saturday, 14th December 2024

ಭವಿಷ್ಯದ ಆಹಾರ ಸಿರಿಧಾನ್ಯದ ಬಗ್ಗೆ ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಅಗತ್ಯ: ಸಚಿವ ಚೆಲುವರಾಯ ಸ್ವಾಮಿ

ಬೆಂಗಳೂರು: ಸಿರಿಧಾನ್ಯ ಭವಿಷ್ಯದ ಆರೋಗ್ಯಪೂರ್ಣ ಆಹಾರವಾಗಿದ್ದು, ಸಿರಿಧಾನ್ಯಗಳ ಮಹತ್ವದ ಬಗ್ಗೆ ವಿದ್ಯಾರ್ಥಿ ಸಮುದಾಯಕ್ಕೆ ಈಗಿನಿಂದಲೇ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ ಹೇಳಿದ್ದಾರೆ.

ನಗರದ ಕ್ರೈಸ್ಟ್‌ ವಿವಿ ಆವರಣದಲ್ಲಿ ಕೃಷಿ ಸಚಿವಾಲಯ ಮತ್ತು ಕ್ರೈಸ್ಟ್‌ ಕಾಲೇಜಿನ ಪೀಸ್‌ ಪ್ರಾಕ್ಸಿಸ್‌ ಅಂಡ್‌ ಡಿಪಾರ್ಟ್‌ ಮೆಂಟ್‌ ಆಫ್‌ ಮೀಡಿಯಾ ಸ್ಟಡೀಸ್‌ ಸಹಯೋಗದಲ್ಲಿ “ಮಿಲೆಟ್‌ ತಿಂತೀರಾ – ಸಿರಿಧಾನ್ಯ ಸಂಸ್ಕೃತಿ ಉತ್ತೇಜಿಸೋಣ” ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ವಿಭಿನ್ನ ಆಹಾರ ಸಂಸ್ಕೃತಿ ಹೊಂದಿರುವ ಕ್ರೈಸ್ಟ್‌ ನಂತಹ ಶಿಕ್ಷಣ ಸಂಸ್ಥೆಗಳಲ್ಲಿ ಸಿರಿಧಾನ್ಯ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ವಿದ್ಯಾರ್ಥಿ ಸಮೂಹ ಭವಿಷ್ಯದ ಆಹಾರದ ಬಗ್ಗೆ ಗಮನಹರಿಸಬೇಕಾಗಿದ್ದು, ಸಿರಿಧಾನ್ಯ ಏಕೆ ಅಗತ್ಯ ಎಂಬ ಕುರಿತು ತಿಳಿದುಕೊಳ್ಳಬೇಕು. ಜಗತ್ತಿನಾದ್ಯಂತ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಅದರಲ್ಲಿ ಪ್ರಮುಖವಾಗಿ ಜೀವನ ಶೈಲಿ, ಆಹಾರ ಪದ್ಧತಿ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಪ್ರಾರಂಭದಿಂದಲೇ ಆಹಾರ ಬಳಕೆಯಲ್ಲಿ ಬದಲಾವಣೆ ಮಾಡಿಕೊಂಡರೆ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.

ಸಿರಿಧಾನ್ಯಗಳು ದೇಹಕ್ಕೆ ಪುಷ್ಟಿ ನೀಡುತ್ತವೆಯಲ್ಲದೇ ದೀರ್ಘಕಾಲದಲ್ಲಿ ದೈಹಿಕ ಸ್ಥಿರತೆ ಹೆಚ್ಚಿಸಲು ನೆರವಾಗಲಿದೆ. ಜಗತ್ತಿನಾದ್ಯಂತ ಸಿರಿಧಾನ್ಯ ಪ್ರಮುಖ ಆಹಾರ ಪದ್ಧತಿಯಾಗಿದೆ. ಕಡಿಮೆ ವೆಚ್ಚ, ಕಡಿಮೆ ಅವಧಿ, ಕಡಿಮೆ ನೀರಿನಲ್ಲಿ ಸಿರಿಧಾನ್ಯಗಳನ್ನು ಬೆಳೆಯುವುದರಿಂದ ರೈತರಿಗೆ ವೆಚ್ಚ ಕಡಿಮೆಯಾಗಿ, ಹೆಚ್ಚಿನ ಆದಾಯ ತಂದುಕೊಡುತ್ತದೆ. ಇದೀಗ ಸಿರಿಧಾನ್ಯಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆ ದೊರೆತಿದ್ದು, ಬ್ರ್ಯಾಂಡಿಂಗ್‌ ಗೆ ಒತ್ತು ನೀಡಲಾಗಿದೆ.

ಜನವರಿ 5 ರಿಂದ ಮೂರು ದಿನಗಳ ಕಾಲ ಅರಮನೆ ಮೈದಾನದಲ್ಲಿ ಸಿರಿಧಾನ್ಯ ಮೇಳದಲ್ಲಿ ದೇಶದ ವಿದೇಶಗಳ ತಜ್ಞರು ಪಾಲ್ಗೊಂಡು ಸಿರಿಧಾನ್ಯಗಳ ಮಹತ್ವದ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ವಿದ್ಯಾರ್ಥಿ ಸಮುದಾಯ ಕೂಡ ಪಾಲ್ಗೊಂಡು ಸಿರಿಧಾನ್ಯಗಳ ಪಾಕಪದ್ಧತಿ, ಉಪ ಉನ್ಪನ್ನಗಳು, ಸಿರಿಧಾನ್ಯದ ಮಹತ್ವದ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದರು.

ಕ್ರೈಸ್ಟ್‌ ವಿವಿ ಉಪಕುಲಪತಿ ಡಾ. ಫಾದರ್‌ ಜೋಸೆಫ್‌ ಮಾತನಾಡಿ, ಜಗತ್ತಿನಲ್ಲಿ ಇಂದು ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡುತ್ತಿದೆ. ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನದಲ್ಲಿ ಸಿರಿಧಾನ್ಯವನ್ನು ತಾವು ಬಹು ಹಿಂದಿನಿಂದ ಬಳಸುತ್ತಿದ್ದು, ದೈಹಿಕ ಆರೋಗ್ಯ ರಕ್ಷಣೆಗೆ ಸಿರಿಧಾನ್ಯಗಳನ್ನು ಪ್ರತಿಯೊಬ್ಬರೂ ಬಳಸುವಂತಾಗಬೇಕು ಎಂದು ಹೇಳಿದರು.

ಕೃಷಿ ಆಯುಕ್ತರಾದ ಎನ್.ವೈ.ಪಾಟೀಲ್‌ ಕೃಷಿ ಇಲಾಖೆ ನಿರ್ದೇಶಕರಾದ ಜಿ.ಟಿ ಪುತ್ರ ಮತ್ತಿತರರು ಉಪಸ್ಥಿತರಿದ್ದರು.