Thursday, 12th September 2024

ನಾಯಕತ್ವ ಬದಲಾವಣೆ ಚರ್ಚೆಯಲ್ಲಿ ಸತ್ಯಾಂಶವಿಲ್ಲ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಸಿಎಂ ಬದಲಾವಣೆ ಬಗ್ಗೆ ಚರ್ಚೆಗೆ ತೆರೆ ಎಳೆದಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ನಾಯಕತ್ವ ಬದಲಾವಣೆ ಚರ್ಚೆಯಲ್ಲಿ ಸತ್ಯಾಂಶವಿಲ್ಲ. ಅಂತಹ ಯಾವುದೇ ವಿಚಾರವೂ ಬಿಜೆಪಿಯಲ್ಲಿ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಕುಟುಂಬ ಸಮೇತವಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದೇವೆ. ರಾಯರ ದರ್ಶನ ಪಡೆದು ನಾಳೆ ವಾಪಸ್ ಆಗುತ್ತಿದ್ದೇವೆ. ಬಳಿಕ ರಾಜ್ಯ ಪ್ರವಾಸದ ಸಿದ್ಧತೆ ಆರಂಭಿಸುವುದಾಗಿ ತಿಳಿಸಿದರು.

ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ನಾಯಕರ ಟ್ವೀಟ್ ಹಾಗೂ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿ ಮುಂದು ವರೆಯುತ್ತಾರೆ. ಅದರಲ್ಲಿ ಯಾವುದೇ ಗೊಂದಲಗಳೂ ಇಲ್ಲ. ಸಿಎಂ ಬದಲಾವಣೆ ಎಂಬ ಚರ್ಚೆ ಕೇವಲ ವದಂತಿಯಷ್ಟೇ ಎಂದರು.

ಅಮಿತ್ ಶಾ ಅವರನ್ನು ಭೇಟಿಯಾದಾಗಲೂ ಅಂತಹ ಯಾವ ವಿಚಾರ ಚರ್ಚೆಗೆ ಬಂದಿಲ್ಲ. ವಿಧಾನಸಭಾ ಚುನಾವಣೆ ಹಾಗೂ ಪಕ್ಷ ಸಂಘಟನೆ ನಿಟ್ಟಿನಲ್ಲಿ ಕೈಗೊಳ್ಳ ಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಬೊಮ್ಮಾಯಿ ಅವರೇ ಪೂರ್ಣಾವಧಿ ವರೆಗೂ ಸಿಎಂ ಆಗಿ ಮುಂದು ವರೆಯುತ್ತಾರೆ. ಬದಲಾವಣೆ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸಿ ಎಂದು ಹೇಳಿದರು.