Friday, 13th December 2024

ಸಂಚಾರಿ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಯುವಕರು ಆರೋಪ ಮುಕ್ತ

karnataka high court

ಬೆಂಗಳೂರು: ಕುಡಿದು ವಾಹನ ಚಲಾಯಿಸಿದ್ದಲ್ಲದೆ, ಹಿಡಿಯಲು ಮುಂದಾದ ಸಂಚಾರಿ ಪೊಲೀಸ್‌ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಹೈಕೋರ್ಟ್‌ ಇಬ್ಬರು ಯುವಕರನ್ನು ಆರೋಪ ಮುಕ್ತಗೊಳಿಸಿದೆ.

ಆರೋಪಿಗಳಾದ ಪ್ರಿಯಾಂಶು ಕುಮಾರ್‌ ಹಾಗೂ ಅಲೋಕ್‌ ಕುಮಾರ್‌ ಸಲ್ಲಿಸಿದ್ದ ಕ್ರಿಮಿ ನಲ್‌ ಮರುಪರಿಶೀಲನಾ ಅರ್ಜಿ ಮಾನ್ಯ ಮಾಡಿರುವ ನ್ಯಾ.ಎಂ.ನವಾಜ್‌ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.

ಆರೋಪಿಗಳ ವಿರುದ್ಧ ಕೇಸ್‌ ದಾಖಲಿಸುವಾಗ ಅನುಸರಿಸಬೇಕಾದ ನಿಯಮ ಪಾಲನೆ ಮಾಡಿಲ್ಲ ಹಾಗೂ ಆರೋಪ ಸಂಬಂಧ ಸೂಕ್ತ ಸಾಕ್ಷ್ಯಾಧಾರ ಒದಗಿಸಿಲ್ಲ ಎಂಬ ಕಾರಣ ನೀಡಿ ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಕುಡಿದು ವಾಹನ ಚಲಾಯಿಸುತ್ತಿದ್ದ ಆರೋಪಿಗಳನ್ನು ತಡೆದು ಪ್ರಶ್ನಿಸಿದಾಗ ಅವರು ತಮ್ಮ ಮೇಲೆ ಹಲ್ಲೆ ನಡೆಸಿದರು. ಘಟನೆ ಸಂದರ್ಭ ಸ್ಥಳದಲ್ಲಿದ್ದ ಕೆಲ ಸಾರ್ವಜನಿಕರು ಆರೋಪಿ ಗಳನ್ನು ವಶಕ್ಕೆ ಪಡೆಯಲು ಸಹಾಯ ಮಾಡಿದರೆಂದು ಎಚ್‌ಎಎಲ್‌ ಟ್ರಾಫಿಕ್‌ ಇನ್‌ಸ್ಪೆಕ್ಟರ್‌ ದೂರಿನಲ್ಲಿ ಹೇಳಲಾಗಿದೆ. ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಪ್ರತ್ಯಕ್ಷದರ್ಶಿಗಳಾಗಿದ್ದಾರೆ. ಆದರೆ, ಸ್ಥಳದಲ್ಲಿದ್ದ ಸಾರ್ವಜನಿಕರ ಹೇಳಿಕೆಗಳನ್ನು ದಾಖಲಿಸಿಕೊಂಡಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣಗಳಲ್ಲಿ ಪೊಲೀಸರು ದಂಡ ವಸೂಲಿ ಮಾಡಲು ಅವಕಾಶವಿಲ್ಲ. ದಂಡ ವನ್ನು ಕೋರ್ಟ್‌ನಲ್ಲಿ ಮಾತ್ರ ಪಾವತಿ ಮಾಡಬೇಕು. ಆದರೆ, ಈ ಪ್ರಕರಣದಲ್ಲಿ ಪೊಲೀಸರು ಅರ್ಜಿದಾರರಿಂದ ದಂಡ ವಸೂಲಿಗೆ ಮುಂದಾಗಿದ್ದರು ಎಂಬುದು ತಿಳಿದು ಬಂದಿದೆ.