Monday, 14th October 2024

Physical Abuse: ಮಹಿಳೆಯ ಬಾಯಿ ಮುಚ್ಚಿ ಎಳೆದೊಯ್ಯಲು ಯತ್ನಿಸಿದ ವ್ಯಕ್ತಿಗೆ ಗೂಸಾ, ಮರ್ಮಾಂಗ ಜಖಂ

physical abuse

ಬೆಂಗಳೂರು: ಕತ್ತಲೆಯಲ್ಲಿ ಮಹಿಳೆಯ ಬಾಯಿ ಮುಚ್ಚಿ ಎಳೆದೊಯ್ಯಲು ಯತ್ನಿಸಿದ (Physical Abuse) ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ (Lynching) ಘಟನೆ ಬೆಂಗಳೂರಿನ ಹೊರವಲಯದ ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ಕಾಲೋನಿ ಬಳಿ ನಿನ್ನೆ ರಾತ್ರಿ (Bangalore Crime news) ನಡೆದಿದೆ. ಆರೋಪಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಹಾಲು ಖರೀದಿಸಲು ಮಹಿಳೆ ಅಂಗಡಿಗೆ ಬಂದಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಹಿಂದಿನಿಂದ ಮಹಿಳೆಯ ಬಾಯಿ ಮುಚ್ಚಿ ಕತ್ತಲೆಯಿದ್ದ ಕಡೆಗೆ ಎಳೆದೊಯ್ಯಲು ಯತ್ನಿಸಿದ್ದಾನೆ. ಆತಂಕಗೊಂಡ ಮಹಿಳೆ ಸಹಾಯಕ್ಕಾಗಿ ಕಿರುಚಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆಯ ನೆರವಿಗೆ ಬಂದ ಸ್ಥಳೀಯ ಯುವಕರ ಗುಂಪು, ಅಪರಿಚಿತ ವ್ಯಕ್ತಿಯನ್ನ ಹಿಡಿದು ಚೆನ್ನಾಗಿ ಥಳಿಸಿದೆ.

ಕುಡಿದ ನಶೆಯಲ್ಲಿದ್ದ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಗುಂಪು ಥಳಿಸಿದೆ. ಈ ಸಂದರ್ಭದಲ್ಲಿ ಮರ್ಮಾಂಗಕ್ಕೂ ಏಟು ಬಿದ್ದಿದೆ. ನಂತರ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಬಂದಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳು ವ್ಯಕ್ತಿಯನ್ನು ಗೊಟ್ಟಿಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಧಾರವಾಡ ಮೂಲದ ರವಿಕುಮಾರ್ ಹಲ್ಲೆಗೊಳಗಾದ ವ್ಯಕ್ತಿ. ಕಲ್ಕೆರೆ ಹೋಟೆಲ್‌ನಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದ ಈತ ಕಳೆದ ರಾತ್ರಿ ಅಂಗಡಿಗೆ ಹಾಲು ತೆಗೆದುಕೊಂಡು ಬರಲು ಹೋಗಿದ್ದ ಮಹಿಳೆಯ ಬಾಯಿ ಮುಚ್ಚಿ ಎಳೆದೊಯ್ಯಲು ಯತ್ನಿಸಿದ್ದ. ಅಲ್ಲಿಯೇ ಇದ್ದ ಯುವಕರು ಮಹಿಳೆ ನೆರವಿಗೆ ಬಂದಿದ್ದು ಕುಡಿದ ನಶೆಯಲ್ಲಿದ್ದ ರವಿಕುಮಾರನನ್ನು ಹಿಡಿದು ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ನಗ್ನಗೊಳಿಸಿ ಮರ್ಮಾಂಗ ಮತ್ತು ವೃಷಣಕ್ಕೆ ಹೊಡೆದಿದ್ದಾರೆ.

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು

ಬೆಂಗಳೂರು: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ. ಚಿಕಿತ್ಸೆ ಫಲಿಸದೆ ಅನುಷಾ ಎಂಬವರು ಕೊನೆಯುಸಿರೆಳೆದಿದ್ದಾರೆ. 2 ದಿನದ ಹಿಂದೆ ಅನುಷಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

ಘಟನೆ ಬೆಂಗಳೂರಿನ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. 5 ವರ್ಷದ ಹಿಂದೆ ಶ್ರೀಹರಿ ಜೊತೆ ಅನುಷಾ ಮದುವೆ ಆಗಿತ್ತು. ಶ್ರೀಹರಿ, ಅನುಷಾ ದಂಪತಿಗೆ ಎರಡು ವರ್ಷದ ಮಗು ಕೂಡ ಇದೆ. ಪತಿಯ ಅನೈತಿಕ ಸಂಬಂಧದ ವಿಚಾರವಾಗಿ ದಂಪತಿ ನಡುವೆ ಗಲಾಟೆಯಾಗುತ್ತಿದ್ದು, ಇದರಿಂದ ಮನನೊಂದು ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರ ಗಾಯಗೊಂಡಿದ್ದ ಅನುಷಾಳನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಓದಿ: Road Accident: ಹೊಸಮನೆ ಹೊಸ್ತಿಲು ತುಳಿದ ಎರಡೇ ದಿನದಲ್ಲಿ ನವವಧು ಆಕ್ಸಿಡೆಂಟ್‌ಗೆ ಬಲಿ