ಬೆಂಗಳೂರು: ಇಂಟ್ರಾ ಆಪರೇಟಿವ್ ರೇಡಿಯೇಶನ್ ಥೆರಪಿ (IORT) ವಿಧಾನದ ಮೂಲಕ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ 41 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದ್ದು, ಭಾರತದಲ್ಲೇ ಇದೋಂದು ಅಪರೂಪದ ಪ್ರಕ್ರಿಯೆಯಾಗಿದೆ.
ಈ ಥೆರಪಿಯ ವಿಶೇಷತೆ ಎಂದರೆ, ಮತ್ತೆಂದೂ ಮೆದುಳಿನ ಗಡ್ಡೆ ಮರುಕಳಿಸದೇ ಇರುವ ರೀತಿಯಲ್ಲಿ ಬಲಿಷ್ಠ ವಿಕಿರಣಗಳ ಮೂಲಕ ಗಡ್ಡೆಯನ್ನು ಸಂಪೂರ್ಣವಾಗಿ ನಿರ್ಣಾಮ ಮಾಡಲಾಗುತ್ತದೆ.
ಈ ಕುರಿತು ಮಾತನಾಡಿದ ನರಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ ರಾಜಕುಮಾರ್ ದೇಶಪಾಂಡೆ, ಸಾಮಾನ್ಯವಾಗಿ ಮೆದುಳಿನ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಲಾಗುತ್ತದೆ. ಆದರೆ, ಗ್ರೇಡ್ 4 ಗ್ಲಿಯೊಬ್ಲಾಸ್ಟೊಮಾ ಎಂಬ ಗಡ್ಡೆಯು ಎಷ್ಟು ಬಾರಿ ತೆಗೆದರೂ ಪುನಃ ಬೆಳೆದುಕೊಳ್ಳುವ ಅಪಾಯ ಹೆಚ್ಚು. ಇದನ್ನು ಶಾಶ್ವತವಾಗಿ ಹೋಗಲಾಡಿಸಲು ಯಾವುದೇ ವಿಧಾನವಿರಲಿಲ್ಲ. ಆದರೀಗ, ಭಾರತದಲ್ಲಿ ಇಂಟ್ರಾ ಆಪರೇಟಿವ್ ರೇಡಿಯೇಶನ್ ಥೆರಪಿ (IORT) ಪರಿಚಯಿಸಲಾಗಿದ್ದು, ಈ ಥೆರಪಿಯಿಂದ ಮೆದುಳಿನ ಗಡ್ಡೆಯ ಮೇಲೆ ನೇರವಾಗಿ ವಿಕಿರಣ ಬಿಡುವ ಮೂಲಕ ಶಾಶ್ವತ ಪರಿಹಾರ ನೀಡ ಬಹುದು.
41 ವರ್ಷದ ವ್ಯಕ್ತಿಯು ಕೆಲ ತಿಂಗಳಿನಿಂದ ಕುತ್ತಿಗೆ ನೋವು, ತಲೆ ನೋವಿನಿಂದ ಬಳಲುತ್ತಿದ್ದರು. ಜೊತೆಗೆ, ಮೆದುಳಿನ ಬಲ ಭಾಗದಲ್ಲಿ ಹಠಾತ್ ನೋವು ಕಾಣಿಸಿಕೊಂಡಿತ್ತು. ಜೊತೆಗೆ, ಎಡಭಾಗದ ದೈಹಿಕ ಚಟುವಟಿಕೆಯಲ್ಲಿ ಪಾರ್ಶ್ವವಾಯುವಿನ ಲಕ್ಷಣಗಳನ್ನೂ ಹೊಂದಿದ್ದರು. ಇವರ ಲಕ್ಷಣಗಳನ್ನು ಗಮನಿಸಿ, ಮೊದಲಿಗೆ ಮೆದುಳಿನ ಎಂಆರ್‌ಐ ಸ್ಕ್ಯಾನ್ ಮಾಡಲಾಯಿತು. ಇದರಿಂದ ರೋಗಿಗೆ ಬಲ ಮೆದುಳಿನ ಭಾಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಮತ್ತು ಆಕ್ರಮಣಕಾರಿ ಮೆದುಳಿನ ಗೆಡ್ಡೆ (ಗ್ರೇಡ್ 4 ಗ್ಲಿಯೊಬ್ಲಾಸ್ಟೊಮಾ) ಬೆಳೆದಿರುವುದು ಗಮನಕ್ಕೆ ಬಂದಿತ್ತು. ಇದು ಸರಿಸುಮಾರು 5ಸೆಮೀ ಗಾತ್ರದಷ್ಟು ದೊಡ್ಡದಾಗಿ ಗಡ್ಡೆ ಬೆಳೆದು, ಅಪಾಯಕಾರಿ ಹಂತಕ್ಕೆ ತಲುಪಿತ್ತು.
ಮೊದಲಿಗೆ ಮೆದುಳಿನ ಗೆಡ್ಡೆಯನ್ನುತೆಗೆದು ಹಾಕಲು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ, ಈ ಶಸ್ತ್ರಚಿಕಿತ್ಸೆಯಿಂದ ಗಡ್ಡೆ ಹೋಗುತ್ತದೆಯಾದರೂ, ಕೆಲ ವರ್ಷದಲ್ಲಿಯೇ ಗಡ್ಡೆ ಮರುಕಳಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಪುನಃ ಬಾರದಂತೆ ಶಾಶ್ವತವಾಗಿ ಗಡ್ಡೆಯನ್ನು ತೆಗೆದು ಹಾಕಲು ಈ ಥೆರಪಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ವ್ಯಕ್ತಿಗೂ ಸಹ ಮತ್ತೊಮ್ಮೆ ಗಡ್ಡೆ ಬೆಳೆಯುವ ಅಪಾಯ ಕಂಡು ಬಂದಿತು. ಹೀಗಾಗಿ ಅವರಿಗೆ ಮೊಲದ ಬಾರಿಗೆ ಇಂಟ್ರಾ ಆಪರೇಟಿವ್ ರೇಡಿಯೇಷನ್ ಥೆರಪಿ (ಐಒಆರ್‌ಟಿ) ಬಳಸಿ, ನೇರವಾಗಿ ಗಡ್ಡೆಗೆ ಈ ವಿಕಿರಣವನ್ನು ಬಿಡುವ ಮೂಲಕ ಗಡ್ಡೆ ಬೆಳೆಯದಂತೆ ಶಮನ ಮಾಡಲಾಯಿತು. ಶಸ್ತ್ರಚಿಕಿತ್ಸೆಯ 5 ದಿನಗಳ ನಂತರ ರೋಗಿಯ ಎಂದಿನ ಸ್ಥಿತಿಗೆ ಮರುಕಳಿಸಿದರು ಎಂದು ವಿವರಣೆ ನೀಡಿದರು.