ಬೆಂಗಳೂರು: ಸಮಾಜದಲ್ಲಿರುವ ಪ್ರಾಮಾಣಿಕತೆಯನ್ನು ಅನ್ವೇಷಿಸುವ ಕುರಿತು ಬಿಹೇವಿಯರಲ್ ಎಕನಾಮಿಸ್ಟ್ ಹಾಗೂ ಲೇಖಕಿ ಜಾನು ಗೋಸ್ವಾಮಿ ರಚಿಸಿರುವ ಟ್ರುಥ್ ಅಬೌಟ್ ಹಾನೆಸ್ಟಿ ಪುಸ್ತಕ ಬಿಡುಗಡೆ ಆಗಿದೆ. ಈ ಪುಸ್ತಕವು ಓದುಗರು ತಮ್ಮ ಆತ್ಮಸಾಕ್ಷಿಗೆ ಮುಖಾಮುಖಿಯಾಗಲು ಮತ್ತು ಪ್ರಾಮಾಣಿಕತೆ ಜೊತೆಗೆ ರಾಜಿಯಾಗುವ ಸಂದರ್ಭಗಳ ಕುರಿತು ಅರಿತುಕೊಳ್ಳಲು ಪ್ರೇರೇಪಣೆ ನೀಡುತ್ತದೆ.
ಈ ಕೃತಿಯು ಈಗಾಗಲೇ ವಿದ್ವಾಂಸರು, ಸರ್ಕಾರಿ ಅಧಿಕಾರಿಗಳು, ಅರ್ಥಶಾಸ್ತ್ರಜ್ಞರು ಸೇರಿದಂತೆ ಆಸಕ್ತ ಓದುಗರ ಮೆಚ್ಚುಗೆಗೆ ಪ್ರಾಪ್ತವಾಗಿದೆ. ಈ ಮೂಲಕ ತತ್ತ್ವಶಾಸ್ತ್ರ, ಇತಿಹಾಸ, ಮಾನವ ನಡವಳಿಕೆ, ಇಂಟರ್ ನ್ಯಾಷನಲ್ ರಿಲೇಷನ್ಸ್ ಮತ್ತು ಜಿಯೋ ಪಾಲಿಟಿಕ್ಸ್ ವಿಷಯಗಳಲ್ಲಿ ಪರಿಣತಿ ಹೊಂದಿರುವ ಪ್ರಸಿದ್ಧ ಲೇಖಕರಾಗಿ ಜಾನು ಗೋಸ್ವಾಮಿ ಅವರ ಖ್ಯಾತಿ ಮತ್ತಷ್ಟು ಹಿರಿದಾಗಿದೆ.
ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಜಾನು ಗೋಸ್ವಾಮಿ ಅವರು, “ನಾವು ಜನರಲ್ಲಿ ಬದಲಾವಣೆಯನ್ನು ತರಬೇಕಿದೆ. ವಿಶೇಷವಾಗಿ ಆ ಬದಲಾವಣೆ ನಮ್ಮಿಂದ ಶುರುವಾಗಬೇಕಿದೆ. ನಮ್ಮ ಮನೆಯಲ್ಲಿ ಆರಂಭವಾಗಬೇಕಿದೆ. ಪ್ರಾಮಾಣಿಕ ಮನೋಭಾವವನ್ನು ಬೆಳೆಸುವುದು ಬದಲಾವಣೆ ಕಡೆಗೆ ಸಾಗುವ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆಯಾಗಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಲೇಖಕರು ಈ ಬಂಡವಾಳಶಾಹಿ ಸಮಾಜದ ಸತ್ಯವನ್ನು ತಿಳಿದುಕೊಳ್ಳಲು ಓದುಗರು ವಿಭಿನ್ನ ದೃಷ್ಟಿಕೋನದಿಂದ ನೋಡಬೇಕು ಎಂದೂ ಹೇಳಿದರು.
ಓದುಗರನ್ನು ಹಿಡಿದಿಡಬಹುದಾದ ಈ ಕೃತಿಯ ಮತ್ತೊಂದು ವಿಶೇಷ ಗುಣವೆಂದರೆ ಲೇಖಕರು ಮಾಡಿರುವ ಆಳವಾದ ಸಂಶೋಧನೆ. ಈ ಸಂಶೋಧನೆ ಗಳು ಗಾಢವಾಗಿ ತಟ್ಟುತ್ತವೆ ಮತ್ತು ಆದಾಯದ ಅಸಮಾನತೆ, ಅಧಿಕಾರಶಾಹಿತನ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆ ಕುರಿತು ತೀವ್ರವಾಗಿ ಯೋಚಿಸುವಂತೆ ಮಾಡುತ್ತವೆ. ಇಲ್ಲಿ ಕೆಲವು ಜೀವನ ಅನುಭವಗಳು ಹೇಗೆ ಮನುಷ್ಯರು ಅಪ್ರಾಮಾಣಿಕರಾಗುವಂತೆ ಮಾಡುತ್ತವೆ ಎಂಬುದನ್ನು ಓದುಗರು ಅನ್ವೇಷಿಸಬಹುದು. ಜೊತೆಗೆ ಓದುಗರು ಇಲ್ಲಿ ಪ್ರಾಮಾಣಿಕತೆ ಅನ್ನುವುದು ಸದ್ಗುಣ ಮಾತ್ರವಲ್ಲ, ಅದು ಬದಲಾವಣೆಗೆ ವೇಗ ನೀಡುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬಹುದಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕದ ಮಾಜಿ ವಿಜಿಲೆನ್ಸ್ ಕಮಿಷನರ್ ಮತ್ತು ಡಿಜಿಪಿ ಐಪಿಎಸ್ (ನಿವೃತ್ತ) ಆರ್ ಶ್ರೀ ಕುಮಾರ್ ಅವರು ಪೊಲೀಸ್ ಸೇವೆ ಮತ್ತು ಕೇಂದ್ರ ಜಾಗೃತ ಆಯೋಗದಲ್ಲಿ ತಾವು ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಿನ ಅನುಭವಗಳನ್ನು ಹಂಚಿ ಕೊಂಡರು.