Thursday, 28th March 2024

ವಿಶ್ವವಾಣಿ ವಿಶೇಷ: ಶಾಸಕರ ಅನಧಿಕೃತ ಗೈರಿಗಿಲ್ಲ ಅಧಿಕೃತ ಕ್ರಮ

ಸರಕಾರಿ ನೌಕರರಿಗಿರುವ ಕಾನೂನು, ಶಾಸಕರಿಗೇಕಿಲ್ಲ 

ರಜೆ ಚೀಟಿ ನೀಡಿದರೂ, ಕೇವಲ ನಾಮ್‌ಕೆವಾಸ್ತೆ

ಬೆಂಗಳೂರು: ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಚಿಂತಕರ ಚಾವಡಿಯಾಗಿರುವ ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಹಾಜರಿದ್ದು ಮಾತನಾಡಬೇಕಾದ ಅನೇಕರು ಚಕ್ಕರ್ ಹೊಡೆಯುತ್ತಿರುವುದು ಇತ್ತೀಚಿಗೆ ಸಾಮಾನ್ಯವಾಗಿದೆ.

ಹೌದು, ಶಾಸನ ರಚನೆಯ ಭಾಗವಾಗಬೇಕಿರುವ ಅನೇಕ ಶಾಸಕರು ಅನಧಿಕೃತವಾಗಿ ಗೈರಾಗುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಕರೋನಾ ಆತಂಕದಲ್ಲಿ ಕಳೆದೊಂದು ವರ್ಷದಿಂದ ನಡೆಯುತ್ತಿರುವ ಸದನ ಕಲಾಪದಲ್ಲಿ ಅನೇಕ ಶಾಸಕರು ಸದನಕ್ಕೆ ಮಾಹಿತಿ ನೀಡದೇ ಗೈರಾಗುತ್ತಿದ್ದಾರೆ.

ಆಡಳಿತ ಪಕ್ಷ ತೆಗೆದುಕೊಳ್ಳುವ ನಿರ್ಧಾರಗಳ ಸಾಧಕ ಬಾಧಕದ ಬಗ್ಗೆ ಚರ್ಚಿಸಿ, ಸರಕಾರಕ್ಕೆ ಸೂಕ್ತ ಮಾರ್ಗ ದರ್ಶನ ನೀಡಬೇಕಾದ ಪ್ರತಿಪಕ್ಷದ ಶಾಸಕರು ಸೇರಿದಂತೆ ಆಡಳಿತ ಪಕ್ಷದವರು ಗೈರಾಗುತ್ತಿದ್ದಾರೆ. ಈ ರೀತಿ ಅನಧಿಕೃತವಾಗಿ ಚಕ್ಕರ್ ಹೊಡೆಯುವ ಶಾಸಕರ ವಿರುದ್ಧ ಕ್ರಮವಹಿಸಲು ಮಾತ್ರ ಸಂಸದೀಯ ನಡಾವಳಿಯಲ್ಲಿ ಯಾವುದೇ ಅಧಿಕಾರವಿಲ್ಲ ಎನ್ನುವ ಮಾತನ್ನು ಅಧಿಕಾರಿಗಳು ಹೇಳಿದ್ದಾರೆ.

ಅನೇಕ ಶಾಸಕರು ಕಲಾಪದಲ್ಲಿ ಭಾಗವಹಿಸಲು ಬಂದರೂ, ಸಭೆಯಲ್ಲಿ ಕುಳಿತುಕೊಳ್ಳದೇ ಹೊರಹೋಗುತ್ತಾರೆ. ಇನ್ನು ಕೆಲವರು ವಿಧಾನಸಭೆಯತ್ತಲೇ ತಲೆ ಹಾಕುವುದಿಲ್ಲ. ಇಂತಹ ಶಾಸಕರ ವಿರುದ್ಧ ವಿಧಾನಸಭಾಧ್ಯಕ್ಷರು ಅಥವಾ ಕಾರ್ಯದರ್ಶಿಗಳು
ಯಾವುದೇ ಕ್ರಮವಹಿಸಲು ಅವಕಾಶವಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.

ಸರಕಾರಿ ಅಧಿಕಾರಿ, ನೌಕರರು ಅಥವಾ ಸಿಬ್ಬಂದಿಗಳು ಅನಧಿಕೃತವಾಗಿ ಅಥವಾ ಹೆಚ್ಚುವರಿ ರಜೆ ತಗೆದುಕೊಂಡರೆ ಕ್ರಮ ತಗೆದು ಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಶಾಸಕರು ಚಕ್ಕರ್ ಹೊಡೆದರೆ ಅವರ ವಿರುದ್ಧ ಕ್ರಮವಹಿಸುವುದಕ್ಕೆ ಏಕೆ ಅವಕಾಶವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಅಧಿವೇಶನದಲ್ಲಿ ಅನೇಕರು ಗೈರು: ಕರೋನಾ ನಂತರ ನಡೆದ ಅಧಿವೇಶನದಲ್ಲಿ ಅನೇಕ ಶಾಸಕರು ಗೈರಾಗಿದ್ದಾರೆ. ಪ್ರಮುಖ ವಾಗಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಲಾಪದತ್ತ ಮುಖಹಾಕಿಲ್ಲ. ಇನ್ನುಳಿದಂತೆ ಪ್ರತಿಪಕ್ಷ ಪ್ರಮುಖ ನಾಯಕರಾದ ಡಾ.ಜಿ ಪರಮೇಶ್ವರ, ಆರ್.ವಿ ದೇಶಪಾಂಡೆ, ಎಚ್.ಡಿ.ರೇವಣ್ಣ, ಬಿಜೆಪಿಯ ಸಿ.ಟಿ ರವಿ ಸೇರಿದಂತೆ ಅನೇಕ
ಶಾಸಕರು ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಾರೆ ಹೊರತು, ಪೂರ್ಣ ಪ್ರಮಾಣದಲ್ಲಿ ಕುಳಿತು ಕಲಾಪದಲ್ಲಿ ಭಾಗವಹಿಸಿಲ್ಲ.

ರಜೆ ಚೀಟಿ ಸಂಪ್ರದಾಯ: ಕೆಲ ಶಾಸಕರು ರಜೆ ಪಡೆಯುವಾಗ ವಿಧಾನ ಸಭಾಧ್ಯಕ್ಷರಿಗೆ ರಜೆ ನೀಡಿ, ಅವರಿಂದ ಸದನಕ್ಕೆ ವಿಷಯ ತಿಳಿಸಿ ರಜೆ ತೆಗೆದುಕೊಳ್ಳು ತ್ತಾರೆ. ಆದರೆ ಈ ರೀತಿ ಮಾಹಿತಿ ನೀಡಲೇಬೇಕು ಎನ್ನುವ ಯಾವುದೇ ಸ್ಪಷ್ಟ ನಿರ್ದೇಶನ ಸಂವಿಧಾನ ದಲ್ಲಿ ಇಲ್ಲ. ಆದ್ದರಿಂದ ಮಾಹಿತಿ ನೀಡದೇ ರಜೆ ತಗೆದುಕೊಳ್ಳುವ ಶಾಸಕರ ವಿರುದ್ಧ ಯಾವುದೇ ಕ್ರಮ ತಗೆದುಕೊಳ್ಳಲು ಸದನ ಅಥವಾ ವಿಧಾನಸಭಾ ಧ್ಯಕ್ಷರಿಗೆ ಅಧಿಕಾರವಿಲ್ಲ ಎನ್ನುವ ಮಾತನ್ನು ಅಧಿಕಾರಿಯೊಬ್ಬರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!