Friday, 19th April 2024

ಜೈಲಿಗೆ ಹೋದವರೆಲ್ಲ ಜಯದೇವ ಸೇರೋದ್ಯಾಕೆ ?

ವಿಶೇಷ ವರದಿ: ಮಂಜುನಾಥ.ಕೆ ಬೆಂಗಳೂರು

ವೈಜ್ಞಾನಿಕ ಕಾರಣವೋ, ಜಾಮೀನಿನ ಕಾರಣವೋ ಎಂಬ ಜಿಜ್ಞಾಸೆ

ಬಂಧನದ ಶಾಕ್‌ಗೆ ಕೆಲವರು ಆಸ್ಪತ್ರೆ ಸೇರುತ್ತಾರೆ ಎನ್ನುತ್ತಾರೆ ತಜ್ಞರು

ಪರಪ್ಪನ ಅಗ್ರಹಾರ ಜೈಲಿಗೆ ಬರುವ ಗಣ್ಯವ್ಯಕ್ತಿಗಳು ಆರೋಗ್ಯದ ನೆಪ ಹೇಳಿಕೊಂಡು ನಗರದ ಜಯದೇವ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆಯೇ? ಅಥವಾ ನಿಜವಾಗಿಯೂ ಆರೋಗ್ಯದಲ್ಲಿ ಏರುಪೇರು ಉಂಟಾಗಿ ದಾಖಲಾಗುತ್ತಿದ್ದಾರೆಯೇ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಮೂಡಿ ಬರುತ್ತಿದೆ.

ಪರಪ್ಪನ ಅಗ್ರಹಾರ ಜೈಲು ಇದೀಗ ಸಿನಿಮಾ ನಟಿಮಣಿಯರು, ರಾಜಕಾರಣಿ ಗಳು ಹಾಗೂ ರಾಜಕಾರಣಿಗಳ ಪುತ್ರರಿಂದ ತುಂಬಿ ತುಳುಕುತ್ತಿದೆ. ವಿವಿಧ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರುವ ಸೆಲೆಬ್ರಿಟಿಗಳು ಹೊರಗಡೆ ಇರು ವಾಗ ಬಾರು- ಪಬ್ ವಿಕೇಂಡ್ ಪಾರ್ಟಿಗಳಂತಹ ಮೋಜನ್ನು ಮಾಡುತ್ತಾ ಐಷರಾಮಿ ಜೀವನ ನಡೆಸುತ್ತಿರುತ್ತಾರೆ.

ಆದರೆ ಬಂಧನಕ್ಕೊಳಗಾದ ತಕ್ಷಣ ಇವರಿಗೆ ಇದ್ದಕ್ಕಿದ್ದ ಹಾಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಇತ್ತೀಚೆಗೆ ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾದ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಐಎಂಎ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳ ಗಾದ ಮಾಜಿ ಸಚಿವ ರೋಷನ್ ಬೇಗ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗೆ ಆರೋಗ್ಯ ಸಮಸ್ಯೆ ಉಂಟಾಗಿ ಜಯದೇವ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ದಾಖ ಲಾಗಿ ಚಿಕಿತ್ಸೆ ಪಡೆದ ಗಣ್ಯರು ಬಹಳಷ್ಟು ಮಂದಿ ಇದ್ದಾರೆ.

ಅನಾರೋಗ್ಯ ನೆಪ ನೀಡಿ ಜಾಮೀನಿಗೆ ಯತ್ನ?: 2011 ರಲ್ಲಿ ಪತ್ನಿಯ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ನಟ ದರ್ಶನ್ ವಿಜಯನಗರ ಪೊಲೀರಿಂದ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಸೇರಿದ್ದರು. ನಂತರ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದ ಹಿನ್ನೆಲೆಯಲ್ಲಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು 2011ರಲ್ಲಿ ಕಿಕ್ ಬ್ಯಾಕ್ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ
ಅಗ್ರಹಾರ ಜೈಲು ಸೇರಿದ್ದರು. ಬಳಿಕ ಅವರ ಆರೋಗ್ಯದಲ್ಲಿಯೂ ಸಮಸ್ಯೆಯಾಗಿ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಇದೆ ರೀತಿ ಮಾಜಿ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು ಕೂಡ ಬಂಧನಕ್ಕೊಗಾಗಿದ್ದಾಗ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಡಿ.ಜೆ.ಹಳ್ಳಿ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಮೇಯರ್ ಸಂಪತ್‌ರಾಜ್ ಮತ್ತು ರೋಷನ್‌ಬೇಗ್ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಅವರನ್ನು ನಗರದ ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಈ ಸೆಲೆಬ್ರಿಟಿಗಳು ಬಂಧನಕ್ಕೊಳಗಾದ ತಕ್ಷಣ ಇವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ದಾಖಲಾಗುವುದರಿಂದ  ಸಾರ್ವಜನಿ ಕರ ಮನಸಿನಲ್ಲಿ ಹಲವು ಅನುಮಾನಗಳು ಮೂಡುವಂತೆ ಮಾಡಿದೆ. ಕೆಲವು ದಿನ ಜೈಲಿನ ಶಿಕ್ಷೆೆಯಿಂದ ಪಾರಾಗಲು ಅಥವಾ ಆರೋಗ್ಯ ಸಮಸ್ಯೆೆ ನೆಪ ನೀಡಿ ಜಾಮೀನಿನ ಮೇಲೆ ಹೊರ ಬರಲು ಪ್ರಯತ್ನಿಸುತ್ತಾರೆಯೇ ಎಂಬ ಅನುಮಾನ ಪ್ರತಿಯೊಬ್ಬ ನ್ನು ಕಾಡತೊಡಗಿದೆ.

ಈ ಬಗ್ಗೆ ವೈದ್ಯರು ಹೇಳುವುದೇನು?: ಬಂಧಕ್ಕೊಳಗಾದಾಗ ಅಥವಾ ಅನಿರೀಕ್ಷಿತ ಘಟನೆಗಳು ನಡೆದಾಗ ಅಂತಹವರ ಶರೀರ ದಲ್ಲಿ ತುಂಬಾ ಒತ್ತಡ ಇರುತ್ತದೆ. ಮಾನಸಿಕ ಒತ್ತಡದಿಂದಾಗಿ ಹಿಂದಿನ ದಿನ ಚೆನ್ನಾಗಿ ಇದ್ದವರ ದೇಹದಲ್ಲಿಯೂ ಅಧಿಕ ರಕ್ತದ ಒತ್ತಡ (ಬಿಪಿ) ಹೆಚ್ಚಾಗಿ, ಹೃದಯದ ಬಡಿತವು ಹೆಚ್ಚಾಗಬಹುದು. ಅಲ್ಲದೇ ಹೃದಯದ ಮೇಲೆ ಕೆಲವು ದುಷ್ಪರಿಣಾಮಗಳು ಆಗಬಹುದು.

ಅಧಿಕ ಮಾನಸಿಕ ಒತ್ತಡದಿಂದ ಈ ರೀತಿ ಆಗುವುದು ಸಹಜ. ಅಂತಹ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಕರಾದ ಡಾ. ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

ಯಾವ ಪ್ರಕರಣದಲ್ಲಿ ಬಂಧನ?
*ಪತ್ನಿಯ ಮೇಲೆ ಹಲ್ಲೆ ಮಾಡಿದ ಪ್ರಕರಣ: ನಟ ದರ್ಶನ್
*ಕಿಕ್ ಬ್ಯಾಕ್ ಪಡೆದ ಆರೋಪ ಪ್ರಕರಣ: ಬಿ.ಎಸ್.ಯಡಿಯೂರಪ್ಪ
*ಕೆಐಎಡಿಬಿ ಭೂ ಹಗರಣ ಪ್ರಕರಣ: ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು
*ಲಂಚ ಪಡೆದ ಪ್ರಕರಣ: ಮಾಜಿ ಶಾಸಕ ವೈ.ಸಂಪಗಿ
*ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್
*ಐಎಂಎ ವಂಚನೆ ಪ್ರಕರಣ: ಮಾಜಿ ಸಚಿವ ರೋಷನ್ ಬೇಗ್

************

ಬಂಧನ ಅಥವಾ ಅನಿರೀಕ್ಷಿತ ಘಟನೆಗಳು ನಡೆದಾಗ ಅಂತಹವರ ಶರೀರದಲ್ಲಿ ತುಂಬಾ ಒತ್ತಡ ಇರುತ್ತದೆ. ಮಾಸಿಕ ಒತ್ತಡ ದಿಂದಾಗಿ ಅಧಿಕ ರಕ್ತದ ಒತ್ತಡವಾಗಿ ಮತ್ತು ಹೃದಯದ ಬಡಿತವು ಹೆಚ್ಚಾಗಬಹುದು. ಇದರಿಂದ ಹೃದಯದ ಮೇಲೆ ಕೆಲವು ದುಷ್ಪರಿಣಾಮಗಳು ಆಗುತ್ತದೆ. ಇಂತಹವರಿಗೆ ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ.

-ಡಾ. ಸಿ.ಎನ್.ಮಂಜುನಾಥ್, ಜಯದೇವ ಆಸ್ಪತ್ರೆಯ ನಿರ್ದೇಶಕರು 

Leave a Reply

Your email address will not be published. Required fields are marked *

error: Content is protected !!